ಕೇರಳ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಯಾವಾಗಲೂ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗುತ್ತದೆ. ಈ ಬಾರಿಯ ಚುನಾವಣೆಯು ವಿಶೇಷವಾಗಿ ಗಮನ ಸೆಳೆದಿದೆ.. ರಾಜಧಾನಿ ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಬಿಜೆಪಿ ಕೈವಶ ಮಾಡಿಕೊಂಡಿದ್ದು, ಕೇರಳದ ರಾಜಕೀಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ಚುನಾವಣೆಯಲ್ಲಿ ಬಿಜೆಪಿ ಹಲವು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.
ಕೇರಳದ ರಾಜಕೀಯವು ಸಾಮಾನ್ಯವಾಗಿ ಎರಡು ಪ್ರಮುಖ ಮೈತ್ರಿಕೂಟಗಳ ನಡುವೆ ಸೀಮಿತವಾಗಿದೆ. ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್, ಕಮ್ಯುನಿಸ್ಟ್ ನೇತೃತ್ವದಲ್ಲಿ) ಮತ್ತು ಯೂಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ಕಾಂಗ್ರೆಸ್ ನೇತೃತ್ವದಲ್ಲಿ). ಈ ಎರಡು ಮೈತ್ರಿಕೂಟಗಳು ಕಳೆದ ಹಲವು ದಶಕಗಳಿಂದ ರಾಜ್ಯದ ಆಡಳಿತವನ್ನು ಹಂಚಿಕೊಂಡಿವೆ. ಆದರೆ ಈ ಬಾರಿಯ ಸ್ಥಳೀಯ ಚುನಾವಣೆಯಲ್ಲಿ ಎಲ್‌ಡಿಎಫ್ ಭಾರೀ ಹಿನ್ನಡೆ ಅನುಭವಿಸಿದ್ದು, ಯೂಡಿಎಫ್ ಭರ್ಜರಿ ಜಯಗಳಿಸಿದೆ. ಈ ಬದಲಾವಣೆಯು ಕೇರಳದಲ್ಲಿ ಬಿಜೆಪಿಯ ಹೆಚ್ಚುತ್ತಿರುವ ಪ್ರಭಾವವನ್ನು ಸೂಚಿಸುತ್ತದೆ.
ಈ ಚುನಾವಣಾ ಫಲಿತಾಂಶಗಳ ನಡುವೆ ಒಂದು ವಿಚಿತ್ರ ಮತ್ತು ಆಸಕ್ತಿದಾಯಕ ಘಟನೆ ನಡೆದಿದೆ. ಪಠಣಂತಿಟ್ಟ ಜಿಲ್ಲೆಯ ಎಲ್‌ಡಿಎಫ್‌ನ ಸ್ಥಳೀಯ ನಾಯಕ ಬಾಬು ವರ್ಗೀಸ್ ಅವರು ಚುನಾವಣೆಗೂ ಮುನ್ನ ಮಾಡಿದ ಶಪಥವು ಇದೀಗ ವೈರಲ್ ಆಗಿದೆ. ಅವರು ತಮ್ಮ ಪಕ್ಷ ಮತ್ತೆ ಗೆಲ್ಲುತ್ತದೆ ಎಂದು ಭರವಸೆ ನೀಡಿದ್ದರು. ಒಂದು ವೇಳೆ ಸೋತರೆ, ತಮ್ಮ ಮೀಸೆಯನ್ನು ಬೋಳಿಸಿಕೊಳ್ಳುತ್ತೇನೆ ಎಂದು ಬೆಟ್ ಹಾಕಿದ್ದರು. ಬಾಬು ವರ್ಗೀಸ್ ಅವರು ಪಠಣಂತಿಟ್ಟದಲ್ಲಿ ಎಲ್‌ಡಿಎಫ್‌ನ ಪ್ರಮುಖ ಮುಖಂಡರಾಗಿದ್ದು, ಅನೇಕ ವರ್ಷಗಳಿಂದ ಪಕ್ಷದ ಕಾರ್ಯಕರ್ತರೊಂದಿಗೆ ನಿಕಟ ಸಂಬಂಧ ಹೊಂದಿದ್ದರು.
ಚುನಾವಣಾ ಫಲಿತಾಂಶಗಳು ಬಂದ ನಂತರ, ಪಠಣಂತಿಟ್ಟದಲ್ಲಿ ಎಲ್‌ಡಿಎಫ್ ಹೀನಾಯ ಸೋಲು ಕಂಡಿದೆ. ಅನೇಕ ವಾರ್ಡ್‌ಗಳಲ್ಲಿ ಯೂಡಿಎಫ್ ಮತ್ತು ಬಿಜೆಪಿ ಗೆಲುವು ಸಾಧಿಸಿದ್ದರಿಂದ, ಎಲ್‌ಡಿಎಫ್‌ನ ಪ್ರಭಾವ ಕುಸಿದಿದೆ. ಈ ಸೋಲಿನ ಬಳಿಕ, ಬಾಬು ವರ್ಗೀಸ್ ಅವರ ಆಪ್ತರು, ಗೆಳೆಯರು ಮತ್ತು ಕಾರ್ಯಕರ್ತರು ಅವರ ಮೇಲೆ ಒತ್ತಡ ಹೇರಿದರು. “ನೀವು ಹೇಳಿದ ಮಾತನ್ನು ಪಾಲಿಸಿ” ಎಂದು ಒತ್ತಾಯಿಸಿದರು. ಅದರಂತೆ ಅವಳು ಮೀಸೆ ಬೋಳಿಸಿಕೊಂಡು ಮಾತು ಉಳಿಸಿಕೊಂಡಿದ್ದಾರೆ. ಈ ವಿಡಿಯೋಗಳು ವಾಟ್ಸಾಪ್ ಗ್ರೂಪ್‌ಗಳು, ಫೇಸ್‌ಬುಕ್ ಮತ್ತು ಎಕ್ಸ್ (ಟ್ವಿಟರ್) ನಲ್ಲಿ ಈ ವಿಚಾರ ಹರಿದಾಡಿತ್ತು. ಅನೇಕರು ಇದನ್ನು ರಾಜಕೀಯ ಡ್ರಾಮಾ ಎಂದು ಕರೆದರು, ಇನ್ನು ಕೆಲವರು ನಾಯಕನ ಧೈರ್ಯವನ್ನು ಪ್ರಶಂಸಿಸಿದರು.
ಅಂತಿಮವಾಗಿ, ಬಾಬು ವರ್ಗೀಸ್ ಅವರು ತಮ್ಮ ಮಾತಿನಂತೆ ಸಾರ್ವಜನಿಕವಾಗಿ ಮೀಸೆಯನ್ನು ಬೋಳಿಸಿಕೊಂಡರು. ಈ ಘಟನೆಯ ವಿಡಿಯೋವನ್ನು ಕಾರ್ಯಕರ್ತರು ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡರು. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಲಕ್ಷಾಂತರ ಮಂದಿ ನೋಡಿದ್ದಾರೆ. ನೆಟ್ಟಿಗರು ವಿವಿಧ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು “ಭಾರತದ ರಾಜಕೀಯ ಇತಿಹಾಸದಲ್ಲಿ ಮಾತು ಉಳಿಸಿಕೊಂಡ ಏಕೈಕ ನಾಯಕ” ಎಂದು ಹಾಸ್ಯವಾಗಿ ಕಾಲೆಳೆದಿದ್ದಾರೆ.
