ತಿರುವನಂತಪುರಂ, ಜೂನ್ 09: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ಅವರ ಪುತ್ರಿ ವೀಣಾ ವಿಜಯನ್ ಅವರಿಗೆ ಜಾರಿ ನಿರ್ದೇಶನಾಲಯ (ED) ಬಿಗ್ ಶಾಕ್ ನೀಡಿದೆ. ಸಿಎಂಆರ್ಎಲ್-ಎಕ್ಸಾಲಾಜಿಕ್ (CMRL-Xcalogic) ಹಣಕಾಸು ವ್ಯವಹಾರಗಳ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಸಮನ್ಸ್ ಜಾರಿ ಮಾಡಿದೆ.
ಸಿಎಂಆರ್‌ಎಲ್–ಎಕ್ಸಾಲಾಜಿಕ್ ಹಣಕಾಸು ವ್ಯವಹಾರಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಣಾ ವಿಜಯನ್ ಸೇರಿದಂತೆ ಒಟ್ಟು ಒಂಬತ್ತು ಮಂದಿಗೆ ಇಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಶುಕ್ರವಾರ ಕೊಚ್ಚಿಯಲ್ಲಿರುವ ಇಡಿ ಕಚೇರಿಗೆ ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಲಾಗಿದ್ದು, ತನಿಖೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಏನಿದು ಸಿಎಂಆರ್‌ಎಲ್–ಎಕ್ಸಾಲಾಜಿಕ್ ಹಗರಣ?
ತನಿಖಾ ಸಂಸ್ಥೆಗಳ ಪ್ರಾಥಮಿಕ ಮಾಹಿತಿಯ ಪ್ರಕಾರ, ವೀಣಾ ವಿಜಯನ್ ಒಡೆತನದ ಎಕ್ಸಾಲಾಜಿಕ್ ಐಟಿ ಸಂಸ್ಥೆ ಮತ್ತು ಖನಿಜ ಕ್ಷೇತ್ರದ ಖಾಸಗಿ ಕಂಪನಿ ಸಿಎಂಆರ್‌ಎಲ್ ನಡುವೆ ನಡೆದ ಹಣಕಾಸು ವ್ಯವಹಾರಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪವಿದೆ.
ಈ ಎರಡು ಕಂಪನಿಗಳ ನಡುವೆ ಯಾವುದೇ ನೈಜ ಸೇವೆಗಳು ನಡೆದಿಲ್ಲ ಎಂಬ ಶಂಕೆ ಇದ್ದರೂ, ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ನಡೆದಿದೆ ಎಂಬುದು ಇಡಿಯ ಪ್ರಮುಖ ಆರೋಪವಾಗಿದೆ. ಈ ಹಣದ ವಾಹಿವಾಟು ಶೆಲ್ ಟ್ರಾನ್ಸಾಕ್ಷನ್‌ಗಳ ಮೂಲಕ ನಡೆದಿರಬಹುದು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಇಡಿ ಅಧಿಕಾರಿಗಳು ವೀಣಾ ವಿಜಯನ್ ಹಾಗೂ ಸಂಬಂಧಿತ ಸಂಸ್ಥೆಗಳ ಹಲವು ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ, ಹಲವು ಪ್ರಮುಖ ದಾಖಲೆಗಳು ಹಾಗೂ ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದ್ದರು.
242 ಬ್ಯಾಂಕ್ ಖಾತೆ ಫ್ರೀಜ್, ₹18 ಕೋಟಿ ಜಪ್ತಿ
ತನಿಖೆಯ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 242 ಬ್ಯಾಂಕ್ ಖಾತೆಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಖಾತೆಗಳಲ್ಲಿ ಸುಮಾರು ₹18 ಕೋಟಿ ಹಣವನ್ನು ಫ್ರೀಜ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರಲ್ಲಿಯೇ ವೀಣಾ ವಿಜಯನ್ ಅವರ ವೈಯಕ್ತಿಕ ಬ್ಯಾಂಕ್ ಖಾತೆಯೂ ಸೇರಿದ್ದು, ಅದರಲ್ಲಿ ಸುಮಾರು ₹1.5 ಲಕ್ಷ ಹಣವಿತ್ತು ಎಂದು ತನಿಖಾ ಮೂಲಗಳು ಹೇಳಿವೆ. ಹಣದ ಮೂಲ ಮತ್ತು ಅದರ ಹರಿವು ಬಗ್ಗೆ ಇಡಿ ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ನ್ಯಾಯಾಲಯದ ತೀರ್ಪು
ಈ ಪ್ರಕರಣದಲ್ಲಿ ಸಿಎಂಆರ್‌ಎಲ್ ಕಂಪನಿಯು ಇಡಿ ತನಿಖೆಗೆ ಕೆಲವು ದಾಖಲೆಗಳನ್ನು ನೀಡಬಾರದು ಎಂದು ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಇದರಿಂದ ತನಿಖೆಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಅದೇ ವೇಳೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ SFIO ವರದಿಯಲ್ಲಿರುವ ಪ್ರಮುಖ ದಾಖಲೆಗಳನ್ನು ಪಡೆಯಲು ಇಡಿಗೆ ನ್ಯಾಯಾಲಯ ಅನುಮತಿ ನೀಡಿದೆ. ಇದರಿಂದ ವೀಣಾ ವಿಜಯನ್ ಹಾಗೂ ಸಿಎಂಆರ್‌ಎಲ್ ನಡುವಿನ ಒಪ್ಪಂದಗಳ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಯಲಿದೆ.
ಆದಾಯ ತೆರಿಗೆ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
