ಕರ್ನಾಟಕದಲ್ಲಿ ಮುಸ್ಲಿಮರಿಗೆ ಮೀಸಲಾತಿ: ಕಾಂಗ್ರೆಸ್‌ ವಿರುದ್ಧ ಮೋದಿ ಆಕ್ರೋಶ

Shn (45)

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ಕಲ್ಪಿಸಿರುವುದನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಟೀಕಿಸಿದ್ದಾರೆ. ಹಿಂದುಳಿದ ವರ್ಗಗಳ (OBC) ಮೀಸಲಾತಿಯನ್ನು ಕಿತ್ತುಕೊಂಡು ಮುಸ್ಲಿಮರಿಗೆ ನೀಡಲಾಗಿದೆ ಎಂದು ಆರೋಪಿಸಿರುವ ಅವರು, ಈ ಕ್ರಮವು ಎಸ್‌ಸಿ, ಎಸ್‌ಟಿ, ಮತ್ತು ಒಬಿಸಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವು ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಅವಮಾನ ಮಾಡಿದೆ ಎಂದು ಮೋದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಯಾಣದ ಹಿಸಾರ್‌ನಲ್ಲಿ ಇಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ, ಕರ್ನಾಟಕದಲ್ಲಿ ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ನೀಡಿರುವ ವಿಷಯವನ್ನು ಎತ್ತಿದರು. ಕಾಂಗ್ರೆಸ್ ಸರ್ಕಾರವು ಒಬಿಸಿ ಸಮುದಾಯಕ್ಕೆ ನೀಡಲಾಗಿದ್ದ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ ಒಡ್ಡಿದೆ ಎಂದು ಆರೋಪಿಸಿದರು. ಈ ಕ್ರಮವು ಎಸ್‌ಸಿ, ಎಸ್‌ಟಿ, ಮತ್ತು ಒಬಿಸಿ ಸಮುದಾಯಗಳ ಜನರಿಗೆ ವಂಚನೆಯಾಗಿದೆ ಎಂದು ವಿವರಿಸಿದ ಅವರು, ಕಾಂಗ್ರೆಸ್‌ನ ಈ ನಡೆ ಸಂವಿಧಾನದ ಆದರ್ಶಗಳಿಗೆ ವಿರುದ್ಧವಾಗಿದೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.

ವಕ್ಫ್ ತಿದ್ದುಪಡಿ ಮಸೂದೆಗೆ ಸಮರ್ಥನೆ

ಪ್ರಧಾನಿ ಮೋದಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ತಿದ್ದುಪಡಿಯ ಮೂಲಕ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಹೇಳಿದ್ದಾರೆ. ವಕ್ಫ್ ತಿದ್ದುಪಡಿಯಿಂದ ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲಾಗಿದೆ ಮತ್ತು ಮುಸ್ಲಿಮರಿಗೆ ಒಟ್ಟಾರೆಯಾಗಿ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಕ್ಫ್ ಕಾನೂನುಗಳನ್ನು ಬದಲಾಯಿಸಲಾಗಿತ್ತು ಎಂದು ಆರೋಪಿಸಿರುವ ಮೋದಿ, ಈ ಬದಲಾವಣೆಗಳು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಮಾಡಲಾಗಿದ್ದವು ಎಂದಿದ್ದಾರೆ. ವಕ್ಫ್ ಹೆಸರಿನಲ್ಲಿ ಭೂಮಿಯ ಕಬಳಿಕೆ ನಡೆದಿತ್ತು ಮತ್ತು ಬಡವರ ಆಸ್ತಿಯನ್ನು ವಕ್ಫ್ ಭೂಮಾಫಿಯಾ ಲೂಟಿ ಮಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ವೋಟ್‌ಬ್ಯಾಂಕ್ ರಾಜಕಾರಣದ ಟೀಕೆ

2013ರಲ್ಲಿ ಕಾಂಗ್ರೆಸ್ ಸರ್ಕಾರವು ಚುನಾವಣಾ ಲಾಭಕ್ಕಾಗಿ ವಕ್ಫ್ ಕಾನೂನನ್ನು ತರಾತುರಿಯಲ್ಲಿ ಬದಲಾಯಿಸಿತು ಎಂದು ಮೋದಿ ಆರೋಪಿಸಿದ್ದಾರೆ. ಈ ಬದಲಾವಣೆಗಳನ್ನು ಸಂವಿಧಾನಿಕ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳದೆ ಮಾಡಲಾಯಿತು ಎಂದು ಟೀಕಿಸಿದ ಅವರು, ಕಾಂಗ್ರೆಸ್ ವಕ್ಫ್ ಕಾನೂನನ್ನು ಸಂವಿಧಾನಕ್ಕಿಂತ ಶ್ರೇಷ್ಠವೆಂದು ಭಾವಿಸಿತು, ಇದು ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಮಾಡಿದ ದೊಡ್ಡ ಅವಮಾನ ಎಂದಿದ್ದಾರೆ.

ಮುಸ್ಲಿಮರ ಬಗ್ಗೆ ಕಾಂಗ್ರೆಸ್‌ಗೆ ನಿಜವಾದ ಕಾಳಜಿ ಇದ್ದರೆ, ಅವರು ತಮ್ಮ ಪಕ್ಷದ ಅಧ್ಯಕ್ಷರಾಗಿ ಮುಸ್ಲಿಮರನ್ನು ಏಕೆ ನೇಮಿಸಿಲ್ಲ ಎಂದು ಪ್ರಶ್ನಿಸಿದ ಮೋದಿ, ಚುನಾವಣೆಯ ಟಿಕೆಟ್‌ಗಳಲ್ಲಿ ಶೇ. 50ರಷ್ಟು ಮುಸ್ಲಿಮರಿಗೆ ಏಕೆ ನೀಡಿಲ್ಲ ಎಂದು ಕೇಳಿದ್ದಾರೆ. ಕಾಂಗ್ರೆಸ್ ದೇಶದ ಹಕ್ಕುಗಳನ್ನು ಬಿಟ್ಟುಕೊಡಲು ಸಿದ್ಧವಿದೆಯಾದರೂ, ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂದು ಆರೋಪಿಸಿದ್ದಾರೆ.

ವಕ್ಫ್ ಕಾನೂನಿನ ದುರ್ಬಳಕೆಯಿಂದ ಭೂಮಾಫಿಯಾಗಳಿಗೆ ಮಾತ್ರ ಲಾಭವಾಯಿತೇ ಹೊರತು ಬಡವರಿಗೆ ಅಥವಾ ಪಾಶ್ಮಾಂಡ ಮುಸ್ಲಿಮರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಮೋದಿ ಟೀಕಿಸಿದ್ದಾರೆ. ವಕ್ಫ್ ಮಂಡಳಿಯ ಮೂಲ ಉದ್ದೇಶವು ಬಡವರನ್ನು, ವಿಶೇಷವಾಗಿ ಮುಸ್ಲಿಂ ಮಹಿಳೆಯರನ್ನು ಉನ್ನತೀಕರಿಸುವುದಾಗಿತ್ತು ಎಂದು ವಿವರಿಸಿದ ಅವರು, ಕೇಂದ್ರ ಸರ್ಕಾರದ ತಿದ್ದುಪಡಿಗೆ ಸಾವಿರಾರು ಮುಸ್ಲಿಂ ಮಹಿಳೆಯರಿಂದ ಬೆಂಬಲದ ಪತ್ರಗಳು ಬಂದಿವೆ ಎಂದಿದ್ದಾರೆ.

 

Exit mobile version