ಕಾನ್ಪುರದಲ್ಲಿ ಭೀಕರ ಹ*ತ್ಯೆ: ಅವಳಿ ಹೆಣ್ಣು ಮಕ್ಕಳ ಕತ್ತು ಸೀಳಿ ರಾಕ್ಷಸನಂತೆ ಕೊಂದ ‘ಸೈಕೋ’ ತಂದೆ

BeFunky collage (54)

11 ವರ್ಷದ ಅವಳಿ ಹೆಣ್ಣು ಮಕ್ಕಳನ್ನು ತಂದೆಯೊಬ್ಬ ರಾಕ್ಷಸನಂತೆ ಕತ್ತು ಸೀಳಿ ಕೊಂದ ಭೀಕರ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಆರೋಪಿ ತನ್ನ ಸ್ವಂತ ಮಕ್ಕಳನ್ನು ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮತ್ತು ಅವನ ಪತ್ನಿ ರೇಷ್ಮಾ ಛೆಟ್ರಿ 2014ರಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಮೊದಲು ಸುಖವಾಗಿದ್ದ ಸಂಸಾರದಲ್ಲಿ ನಂತರ ಬಿರುಕು ಬಿತ್ತು. ಆರೋಪಿ ಮದ್ಯವ್ಯಸನಿಯಾಗಿ ಪತ್ನಿಗೆ ಪ್ರತಿದಿನ ಚಿತ್ರಹಿಂಸೆ ನೀಡುತ್ತಿದ್ದನು. ಇಷ್ಟೇ ಅಲ್ಲದೆ, ಮನೆಯ ಪ್ರತಿ ಮೂಲೆಯಲ್ಲಿ ಮತ್ತು ಮಲಗುವ ಕೋಣೆಯಲ್ಲೂ CCTV ಕ್ಯಾಮೆರಾಗಳನ್ನು ಅಳವಡಿಸಿ ಪತ್ನಿಯ ಮೇಲೆ ನಿರಂತರ ನಿಗಾ ಇಟ್ಟಿದ್ದನು.

ದಾರುಣ ಕೊಲೆಯ ವಿವರಗಳು:

ಕೊಲೆಯ ಹಿಂದಿನ ರಾತ್ರಿ ಕುಟುಂಬದವರೆಲ್ಲರೂ ಒಟ್ಟಿಗೆ ಊಟ ಮಾಡಿದ್ದರು. ನಂತರ ಆರೋಪಿ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಮಲಗಿಸಲು ತನ್ನ ಕೋಣೆಗೆ ಕರೆದೊಯ್ದಿದ್ದ. ಪತ್ನಿ ರೇಷ್ಮಾ ಸಿಸಿಟಿವಿ ಮಾನಿಟರ್‌ನಲ್ಲಿ ನೋಡುತ್ತಿದ್ದಾಗ ಆರೋಪಿ ಫೋನ್‌ನಲ್ಲಿ ದೀರ್ಘಕಾಲ ಮಾತನಾಡುತ್ತಿದ್ದುದು ಕಂಡುಬಂದಿತು.

ಬೆಳಗಿನ ಜಾವ 2:30ಕ್ಕೆ ಆತ ಒಬ್ಬ ಮಗಳನ್ನು ಸ್ನಾನಗೃಹಕ್ಕೆ ಕರೆದೊಯ್ದು ವಾಪಸ್ ಬಂದನು. ಸ್ವಲ್ಪ ಸಮಯದ ನಂತರ ಕೋಣೆಯ ದೀಪಗಳನ್ನು ಆಫ್ ಮಾಡಿದನು. ಆ ಕರಾಳ ಕ್ಷಣದಲ್ಲೇ ಇಬ್ಬರು ಮಕ್ಕಳ ಕತ್ತು ಹರಿತವಾದ ಆಯುಧದಿಂದ ಸೀಳಿ ಹತ್ಯೆ ಮಾಡಿದ್ದಾನೆ.

ಕೃತ್ಯ ಎಸಗಿದ ನಂತರ ಏನೂ ಅರಿಯದವನಂತೆ ತಾನೇ ಪೊಲೀಸರಿಗೆ ಫೋನ್ ಮಾಡಿ “ಮನೆಯಲ್ಲಿ ಕೊಲೆಯಾಗಿದೆ” ಎಂದು ಮಾಹಿತಿ ನೀಡಿ ಪೊಲೀಸರನ್ನು ದಾರಿ ತಪ್ಪಿಸಲು ನಾಟಕ ಮಾಡಿದ್ದಾನೆ.

ಪೊಲೀಸರು ಸ್ಥಳಕ್ಕೆ ಬಂದಾಗ ಇಬ್ಬರು ಹೆಣ್ಣು ಮಕ್ಕಳ ಶವಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು. ರೇಷ್ಮಾ ಛೆಟ್ರಿ ಪೊಲೀಸರ ಮುಂದೆ ಕಣ್ಣೀರು ಹಾಕುತ್ತಾ, “ಆತ ನಮ್ಮನ್ನು ಕೊಲ್ಲುವುದಾಗಿ ಆಗಾಗ ಬೆದರಿಕೆ ಹಾಕುತ್ತಿದ್ದ. ನನ್ನನ್ನು ಹೊಡೆದು ಮನೆಯಿಂದ ಹೊರಹಾಕುತ್ತಿದ್ದ” ಎಂದು ಹೇಳಿದ್ದಾರೆ. ಒಂಬತ್ತು ತಿಂಗಳು ಮಕ್ಕಳಿಂದ ದೂರವಿದ್ದ ರೇಷ್ಮಾ, ಮಕ್ಕಳ ಮೇಲಿನ ಪ್ರೀತಿಗಾಗಿ ಮನೆಗೆ ಮರಳಿ ಬಂದಿದ್ದರು. ಆದರೆ ಬಂದ ಕೆಲವೇ ದಿನಗಳಲ್ಲಿ ಮಕ್ಕಳ ಹೆಣ ನೋಡುವಂತಾಗಿದೆ.

ಹಿರಿಯ ಪೊಲೀಸ್ ಅಧಿಕಾರಿ ದೀಪೇಂದ್ರ ನಾಥ್ ಚೌಧರಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವಿಧಿವಿಜ್ಞಾನ ತಂಡ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಹಂತಕ ತಂದೆಯನ್ನು ಬಂಧಿಸಲಾಗಿದ್ದು, ಈ ದಾರುಣ ಹತ್ಯೆಯ ಹಿಂದಿನ ನಿಜವಾದ ಉದ್ದೇಶವನ್ನು ಪತ್ತೆಹಚ್ಚಲು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

Exit mobile version