ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿರುವ ಕೆ. ಅಣ್ಣಾಮಲೈ ಅವರು, ತಮಗೆ ವಹಿಸಲಾಗಿದ್ದ 6 ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿ ಜವಾಬ್ದಾರಿಯಿಂದ ಹಿಂದೆ ಸರಿಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ತಮ್ಮ ನಿರ್ಧಾರದ ಕುರಿತು ಸ್ಪಷ್ಟನೆ ನೀಡಿರುವ ಅಣ್ಣಾಮಲೈ ಅವರು, ನನ್ನ ತಂದೆಯವರ ಆರೋಗ್ಯ ಹದಗೆಟ್ಟಿದೆ. ಈ ಸಮಯದಲ್ಲಿ ಅವರ ಜೊತೆಗಿದ್ದು ಅವರನ್ನು ನೋಡಿಕೊಳ್ಳುವುದು ನನ್ನ ಮೊದಲ ಕರ್ತವ್ಯವಾಗಿದೆ. ಕೊಯಮುತ್ತೂರಿನಲ್ಲಿಯೇ ವಾಸ್ತವ್ಯ ಹೂಡಬೇಕಿರುವುದರಿಂದ, ಚುನಾವಣಾ ಕೆಲಸಗಳಿಗಾಗಿ ರಾಜ್ಯಾದ್ಯಂತ ಹೆಚ್ಚು ಪ್ರಯಾಣ ಮಾಡಲು ನನಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜವಾಬ್ದಾರಿಯಿಂದ ಹಿಂದೆ ಸರಿದಿದ್ದೇನೆ ಈ ಜವಾಬ್ದಾರಿಯನ್ನು ಇತರೆ ಸೂಕ್ತ ನಾಯಕರಿಗೆ ನೀಡುವಂತೆ ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಅಣ್ಣಾಮಲೈ ಅವರು ಕೇವಲ ಕೌಟುಂಬಿಕ ಕಾರಣಗಳಿಗಾಗಿ ಹಿಂದೆ ಸರಿದಿದ್ದಾರೆಯೇ ಅಥವಾ ಇದರ ಹಿಂದೆ ರಾಜಕೀಯ ಅಸಮಾಧಾನವಿದೆಯೇ ಎಂಬ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ, ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷರಾಗಿ ರಾಜ್ಯಾದ್ಯಂತ ಪ್ರಭಾವ ಹೊಂದಿರುವ ಅಣ್ಣಾಮಲೈ ಅವರನ್ನು ಕೇವಲ ಆರು ಕ್ಷೇತ್ರಗಳಿಗೆ ಸೀಮಿತಗೊಳಿಸಿದ್ದು ಅವರ ಬೆಂಬಲಿಗರಲ್ಲಿ ಅಸಮಾಧಾನ ಮೂಡಿಸಿದೆ. ಇದರ ಜತೆಗೆ ಪಕ್ಷದ ರಾಷ್ಟ್ರೀಯ ನಾಯಕತ್ವ ಅಥವಾ ರಾಜ್ಯ ಘಟಕದ ಪ್ರಮುಖ ನಿರ್ಧಾರಗಳಲ್ಲಿ ತಮ್ಮನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಭಾವನೆ ಅಣ್ಣಾಮಲೈ ಅವರಲ್ಲಿ ಮೂಡಿರಬಹುದು. ವಿಶೇಷವೆಂದರೆ, ಅಣ್ಣಾಮಲೈ ಅವರು ಸ್ಪರ್ಧಿಸಬಹುದು ಎಂದು ನಿರೀಕ್ಷಿಸಲಾಗಿದ್ದ ‘ಸಿಂಗಾನಲ್ಲೂರು’ ಕ್ಷೇತ್ರವೂ ಈ ಆರು ಕ್ಷೇತ್ರಗಳ ಪಟ್ಟಿಯಲ್ಲಿತ್ತು. ಉಸ್ತುವಾರಿ ಹೊಣೆ ಹೊತ್ತರೆ ಸ್ವತಃ ಸ್ಪರ್ಧಿಸಲು ತಾಂತ್ರಿಕ ಅಡಚಣೆಗಳಾಗಬಹುದು ಹೀಗಾಗಿ ಅಣ್ಣಾಮಲೈ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕೇಳಿಬರುತ್ತಿದೆ.
ಅಣ್ಣಾಮಲೈ ಅವರ ಮನವಿಯನ್ನು ಪಕ್ಷದ ವರಿಷ್ಠರು ಹಾಗೂ ರಾಜ್ಯಾಧ್ಯಕ್ಷರು ಗಮನಿಸಿದ್ದು, ಶೀಘ್ರದಲ್ಲೇ ಈ ಆರು ಕ್ಷೇತ್ರಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಕ ಮಾಡುವ ಸಾಧ್ಯತೆಯಿದೆ. ಅಣ್ಣಾಮಲೈ ಅವರಂತಹ ಜನಪ್ರಿಯ ನಾಯಕ ಚುನಾವಣಾ ಅಖಾಡದಿಂದ ದೂರ ಉಳಿದರೆ ಅದು ಬಿಜೆಪಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಆತಂಕವೂ ಕಾರ್ಯಕರ್ತರಲ್ಲಿದೆ.
ಒಟ್ಟಾರೆಯಾಗಿ, ಅಣ್ಣಾಮಲೈ ಅವರ ಈ ನಡೆ ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದು ಕೇವಲ ತಂದೆಯ ಅನಾರೋಗ್ಯವೋ ಅಥವಾ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಇದೆಯೇ ಎಂದು ಕುತೂಹಲ ಮೂಡಿದೆ.
