ಕಿರುಕುಳಕ್ಕೆ ಯುವತಿ ಆ*ತ್ಮಹ*ತ್ಯೆ: ಹೆಣಕ್ಕೆ ತಾಳಿ ಕಟ್ಟಿದ ವ್ಯಕ್ತಿ!

BeFunky collage (28)

ತನ್ನ ನಿರಂತರ ಕಿರುಕುಳಕ್ಕೆ ಬಲಿಯಾಗಿ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಹಣಕ್ಕೆ ಆರೋಪಿ ಯುವಕನೇ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ತಾಳಿ ಕಟ್ಟಿ ಮದುವೆಯಾದ ಘಟನೆ ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ನಡೆದಿದೆ. ಈ ವಿಲಕ್ಷಣ ಮತ್ತು ಹೃದಯಭೇದಕ ಘಟನೆಯು ರಾಜ್ಯದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ವಿವರ :

ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಮನೀಶ್ ಮುರ್ಮು ಮತ್ತು ಮೃತ ಯುವತಿಯ ನಿಶ್ಚಿತಾರ್ಥ ನಾಲ್ಕು ತಿಂಗಳ ಹಿಂದೆ ನಡೆದಿತ್ತು. ಎರಡು ಕುಟುಂಬಗಳ ಒಪ್ಪಿಗೆಯ ಮೇರೆಗೆ ಮದುವೆಯಾಗುವುದಾಗಿ ನಂಬಿಸಿ ಮನೀಶ್ ಯುವತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಆದರೆ ಮನೆಗೆ ಬಂದ ದಿನದಿಂದಲೇ ಆಕೆಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಆರೋಪವಿದೆ.

ಯುವತಿಯ ತಂದೆ ಮದುವೆ ದಿನಾಂಕ ನಿಗದಿಪಡಿಸುವಂತೆ ಒತ್ತಡ ಹೇರಿದಾಗ, ಶುಕ್ರವಾರ ಬೆಳಗ್ಗೆ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಸ್ಪತ್ರೆಗೆ ಸಾಗಿಸಿದಾಗ ಆಕೆ ಈಗಾಗಲೇ ಮೃತಪಟ್ಟಿದ್ದಳು ಎಂದು ವೈದ್ಯರು ಘೋಷಿಸಿದ್ದಾರೆ.

ಹೆಣಕ್ಕೆ ತಾಳಿ ಕಟ್ಟಿದ ಆರೋಪಿ

ಘಟನೆಯ ನಂತರ ಎರಡು ಕುಟುಂಬಗಳ ನಡುವೆ ತೀವ್ರ ಜಗಳವಾಗಿ, ಯಾರೂ ಶವವನ್ನು ಸ್ವೀಕರಿಸಲು ಮುಂದಾಗಲಿಲ್ಲ. ಪರಿಸ್ಥಿತಿ ನಿಯಂತ್ರಿಸಲು ಕಷ್ಟವಾದಾಗ ಪೊಲೀಸರು ಆರೋಪಿ ಮನೀಶ್‌ನನ್ನು ಕಸ್ಟಡಿಯಿಂದ ಕರೆತಂದು, ನೂರಾರು ಜನರ ಸಮ್ಮುಖದಲ್ಲಿ ಮೃತ ಯುವತಿಯ ಹಣೆಗೆ ಸಿಂಧೂರ ಹಚ್ಚಿ, ಸಾಂಕೇತಿಕವಾಗಿ ತಾಳಿ ಕಟ್ಟಿಸಿದರು. ಈ ವಿಧಿವಿಧಾನಗಳು ಮುಗಿದ ನಂತರವೇ ಯುವತಿಯ ಅಂತ್ಯಕ್ರಿಯೆ ನಡೆಸಲು ಸಾಧ್ಯವಾಯಿತು.

ಪೊಲೀಸರು ಮನೀಶ್ ಮುರ್ಮುನನ್ನು ಬಂಧಿಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಈ ಘಟನೆಯು ಸಮಾಜದಲ್ಲಿ ಮಹಿಳೆಯರ ಮೇಲಿನ ಕಿರುಕುಳ ಮತ್ತು ಮಾನಸಿಕ ಹಿಂಸೆಯ ತೀವ್ರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಮಹಿಳಾ ಸಂಘಟನೆಗಳು ಈ ಘಟನೆಯನ್ನು ಖಂಡಿಸಿ, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿವೆ.

Exit mobile version