ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯ 10 ವೀರ ಯೋಧರು ದುರ್ಮರಣಕ್ಕೀಡಾಗಿದ್ದಾರೆ.. ಎತ್ತರದ ಪರ್ವತ ಪ್ರದೇಶದಲ್ಲಿರುವ ಪೋಸ್ಟ್‌ಗೆ ತೆರಳುತ್ತಿದ್ದ ಸೇನಾ ವಾಹನವು ಚಾಲಕನ ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಈ ಘೋರ ದುರಂತ ಸಂಭವಿಸಿದೆ. ಈ ದುರ್ಘಟನೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.
ಭದೇರ್ವಾ – ಚಂಬಾ ಅಂತಾರಾಜ್ಯ ಹೆದ್ದಾರಿಯ ಖನ್ನಿ ಟಾಪ್ ಪ್ರದೇಶದಲ್ಲಿ ಈ ಅಪಘಾತ ನಡೆದಿದೆ. ಅಪಘಾತದ ಸಮಯದಲ್ಲಿ ವಾಹನದಲ್ಲಿ ಒಟ್ಟು 17 ಮಂದಿ ಯೋಧರು ಪ್ರಯಾಣಿಸುತ್ತಿದ್ದರು. ಅವರಲ್ಲಿ 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತ ಸಂಭವಿಸಿದ ತಕ್ಷಣವೇ ಸೇನಾ ಸಿಬ್ಬಂದಿ, ಸ್ಥಳೀಯ ಪೊಲೀಸರು ಹಾಗೂ ಗ್ರಾಮಸ್ಥರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು. ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ಕಳುಹಿಸಲಾಯಿತು. ತೀವ್ರವಾಗಿ ಗಾಯಗೊಂಡ ಕೆಲವು ಯೋಧರನ್ನು ಹೆಚ್ಚಿನ ಚಿಕಿತ್ಸೆಗೆ ಉಧಮ್‌ಪುರ ಮಿಲಿಟರಿ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ಸಾಗಿಸಲಾಯಿತು.
ಆರಂಭದಲ್ಲಿ ನಾಲ್ವರು ಯೋಧರ ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ, ನಂತರ ಚಿಕಿತ್ಸೆ ಪಡೆಯುತ್ತಿದ್ದ ಇನ್ನೂ ಆರು ಮಂದಿ ಸಾವಿಗೀಡಾದ ಹಿನ್ನೆಲೆ ಮೃತರ ಸಂಖ್ಯೆ 10ಕ್ಕೆ ಏರಿಕೆಯಾಯಿತು. ಗಾಯಗೊಂಡ ಯೋಧರಿಗೆ ತಜ್ಞ ವೈದ್ಯರ ತಂಡದ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದು, ‘X’ನಲ್ಲಿ ಪೋಸ್ಟ್ ಮಾಡಿ, “ದೋಡಾದಲ್ಲಿ ಸಂಭವಿಸಿದ ಈ ಅಪಘಾತದಿಂದ ನನಗೆ ತೀವ್ರ ನೋವಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರನ್ನು ಕಳೆದುಕೊಂಡಿರುವುದು ದೇಶಕ್ಕೆ ಅಪಾರ ನಷ್ಟ. ಅವರ ಸೇವೆ ಮತ್ತು ತ್ಯಾಗವನ್ನು ರಾಷ್ಟ್ರ ಸದಾ ಸ್ಮರಿಸಲಿದೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಸಂತ್ರಸ್ತ ಕುಟುಂಬಗಳಿಗೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗುತ್ತಿದೆ” ಎಂದು ಬರೆದುಕೊಂಡಿದ್ದಾರೆ.
ಈ ದುರ್ಘಟನೆಯ ಬಗ್ಗೆ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅಧಿಕೃತವಾಗಿ ಮಾಹಿತಿ ನೀಡಿದ್ದು, ಮೃತಪಟ್ಟ ಯೋಧರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. “ದೋಡಾದಲ್ಲಿ ನಡೆದ ಈ ದುರದೃಷ್ಟಕರ ಘಟನೆಯಲ್ಲಿ ನಮ್ಮ 10 ವೀರ ಸೈನಿಕರನ್ನು ಕಳೆದುಕೊಂಡಿರುವುದು ತೀವ್ರ ದುಃಖ ತಂದಿದೆ. ಅವರ ಸೇವೆ ಮತ್ತು ತ್ಯಾಗವನ್ನು ರಾಷ್ಟ್ರ ಎಂದಿಗೂ ಮರೆತು ಬಿಡುವುದಿಲ್ಲ. ದುಃಖಿತ ಕುಟುಂಬಗಳ ಜೊತೆ ನಾವು ನಿಂತಿದ್ದೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಈ ದುರ್ಘಟನೆಗೆ ಕಂಬನಿ ಮಿಡಿದು, ವೀರ ಯೋಧರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡಲು ಕೇಂದ್ರ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
