ವಾಷಿಂಗ್ಟನ್: ಅಮೆರಿಕದ ಸಿಯಾಟಲ್‌ನಲ್ಲಿ ಪೊಲೀಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದ ಭಾರತೀಯ ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ ಕೊನೆಗೂ ನ್ಯಾಯ ಸಿಕ್ಕಿದೆ. ಈ ಭೀಕರ ಅಪಘಾತದ ಹಿನ್ನೆಲೆಯಲ್ಲಿ ಸಿಯಾಟಲ್ ನಗರ ಆಡಳಿತವು ಜಾಹ್ನವಿ ಕುಟುಂಬಕ್ಕೆ 29 ಮಿಲಿಯನ್ ಡಾಲರ್ (ಅಂದಾಜು 262 ಕೋಟಿ ರೂಪಾಯಿ) ಬೃಹತ್ ಮೊತ್ತದ ಪರಿಹಾರವನ್ನು ಘೋಷಿಸಿದೆ. ಇದು ಕೇವಲ ಆರ್ಥಿಕ ಪರಿಹಾರವಲ್ಲ, ಬದಲಿಗೆ ವಿದ್ಯಾರ್ಥಿನಿಯ ಸಾವನ್ನು ಅಪಹಾಸ್ಯ ಮಾಡಿದ್ದ ಪೊಲೀಸರಿಗೆ ತಕ್ಕ ಶಾಸ್ತಿಯಾಗಿದೆ. jaahnavi-kandula-family-gets-262-crore-compensation-seattle-police-accident
ಏನಿದು ಘಟನೆ?
2023ರಲ್ಲಿ ಸಿಯಾಟಲ್‌ನಲ್ಲಿ ರಸ್ತೆ ದಾಟುತ್ತಿದ್ದ 23 ವರ್ಷದ ಜಾಹ್ನವಿ ಕಂದುಲಾ ಅವರಿಗೆ ವೇಗವಾಗಿ ಬಂದ ಪೊಲೀಸ್ ವಾಹನವೊಂದು ಡಿಕ್ಕಿ ಹೊಡೆದಿತ್ತು. ಪೊಲೀಸ್ ಅಧಿಕಾರಿ ಕೆವಿನ್ ಡೇವ್ ಅವರು ವಾಹನವನ್ನು ಅತೀ ವೇಗವಾಗಿ ಚಲಾಯಿಸುತ್ತಿದ್ದ ಪರಿಣಾಮವಾಗಿ ಈ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಜಾಹ್ನವಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇವರು ಸಿಯಾಟಲ್‌ನ ನಾರ್ತ್ ಈಸ್ಟರ್ನ್ ಯೂನಿವರ್ಸಿಟಿಯಲ್ಲಿ ಮಾಹಿತಿ ವ್ಯವಸ್ಥೆ (Information Systems) ವಿಷಯದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.
ಈ ಪ್ರಕರಣವು ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು ಇದಕ್ಕೆ ಕಾರಣ ಪೊಲೀಸರ ಅಮಾನವೀಯ ವರ್ತನೆ. ಅಪಘಾತ ನಡೆದ ಸ್ಥಳದಲ್ಲಿದ್ದ ಡೇನಿಯಲ್ ಆಡೆರರ್ ಎಂಬ ಪೊಲೀಸ್ ಅಧಿಕಾರಿ, ಜಾಹ್ನವಿ ಅವರ ಸಾವನ್ನು ಗೇಲಿ ಮಾಡಿದ್ದ ದೃಶ್ಯಗಳು ಬಾಡಿ ಕ್ಯಾಮರಾದಲ್ಲಿ ದಾಖಲಾಗಿದ್ದವು. ಅವಳು ಸತ್ತಿದ್ದಾಳೆ, ಬಸ್ಸಿನ ಮೇಲ್ಛಾವಣಿಯ ಮೇಲೆ ಬಿದ್ದಿದ್ದಾಳೆ. ಅವಳ ಜೀವಕ್ಕೆ ಸೀಮಿತ ಮೌಲ್ಯವಿದೆ, ಕೇವಲ 11,000 ಡಾಲರ್‌ನ ಚೆಕ್ ಕೊಟ್ಟರೆ ಸಾಕು ಎಂದು ನಗುತ್ತಾ ಮಾತನಾಡಿದ್ದ ಆಡೆರರ್ ಮಾತುಗಳು ಭಾರತೀಯರನ್ನ ಕೆರಳಿಸಿತ್ತು.
ಜಾಹ್ನವಿ ಸಾವಿಗೆ ನ್ಯಾಯ ಸಿಗಬೇಕು ಎಂದು ಸಿಯಾಟಲ್ ನಾಗರಿಕರು ಮತ್ತು ಭಾರತೀಯ ಮೂಲದ ಜನರು ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಇದರ ಫಲವಾಗಿ, ಅಪಘಾತಕ್ಕೆ ಕಾರಣರಾದ ಕೆವಿನ್ ಡೇವ್ ಮತ್ತು ಮೃತಳನ್ನು ಅಪಹಾಸ್ಯ ಮಾಡಿದ್ದ ಡೇನಿಯಲ್ ಆಡೆರರ್ ಇಬ್ಬರನ್ನೂ ಸೇವೆಯಿಂದ ವಜಾಗೊಳಿಸಲಾಯಿತು. ಅಲ್ಲದೆ ಕೆವಿನ್ ಅವರಿಗೆ 5 ಸಾವಿರ ಡಾಲರ್ ದಂಡ ವಿಧಿಸಲಾಯಿತು. ಆದರೆ, ಜಾಹ್ನವಿ ಕುಟುಂಬವು ಕ್ರಿಮಿನಲ್ ಮೊಕದ್ದಮೆ ಮತ್ತು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿತ್ತು.
ಸುದೀರ್ಘ ವಿಚಾರಣೆಯ ನಂತರ, ಸಿಯಾಟಲ್ ನಗರ ಆಡಳಿತವು ಈ ಬೃಹತ್ ಮೊತ್ತದ ಪರಿಹಾರ ನೀಡಲು ಒಪ್ಪಿಕೊಂಡಿದೆ. ವಕೀಲೆ ಎರಿಕಾ ಇವಾನ್ಸ್ ಈ ಬಗ್ಗೆ ಮಾತನಾಡಿ, ಜಾಹ್ನವಿ ಅವರ ಜೀವ ಅತ್ಯಂತ ಅಮೂಲ್ಯವಾಗಿತ್ತು. ಈ ಪರಿಹಾರವು ಅವರ ಕುಟುಂಬಕ್ಕೆ ಮತ್ತು ಸಮುದಾಯಕ್ಕೆ ಸಮಾಧಾನ ತರುತ್ತದೆ ಎಂದಿದ್ದಾರೆ. ಸಿಯಾಟಲ್ ನಗರ ಆಡಳಿತವು ಸಹ ಈ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದು, ಈ ಹಣವು ಕಂದುಲಾ ಕುಟುಂಬಕ್ಕೆ ಸ್ವಲ್ಪ ಮಟ್ಟದ ಶಾಂತಿ ನೀಡಲಿ ಎಂದು ಆಶಿಸಿದೆ.
