ಇಸ್ರೋ ಮುಡಿಗೆ ಮತ್ತೊಂದು ಗರಿ: ಅಮೆರಿಕದ ಬೃಹತ್ ‘ಬ್ಲೂಬರ್ಡ್’ ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಿದ LVM3 ರಾಕೆಟ್!

Untitled design 2025 12 24T104529.409

ಶ್ರೀಹರಿಕೋಟಾ (ಆಂಧ್ರ ಪ್ರದೇಶ): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ ಮುಂಜಾನೆ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಇಸ್ರೋದ ಅತ್ಯಂತ ಭಾರವಾದ ಮತ್ತು ಶಕ್ತಿಶಾಲಿ ಉಡಾವಣಾ ವಾಹಕವಾದ ಎಲ್‌ವಿಎಂ3-ಎಂ6 (LVM3-M6) ರಾಕೆಟ್, ಅಮೆರಿಕದ ಹೊಸ ತಲೆಮಾರಿನ ಸಂವಹನ ಉಪಗ್ರಹ ‘ಬ್ಲೂಬರ್ಡ್ ಬ್ಲಾಕ್-2’ (BlueBird Block-2) ಅನ್ನು ಹೊತ್ತು ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ.

ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಲಾಂಚ್ ಪ್ಯಾಡ್‌ನಿಂದ ಬೆಳಿಗ್ಗೆ ಸರಿಯಾಗಿ 8.54ಕ್ಕೆ ಈ ಉಡಾವಣೆ ನಡೆಯಿತು. 43.5 ಮೀಟರ್ ಎತ್ತರದ ಎಲ್‌ವಿಎಂ3 ರಾಕೆಟ್, ಇದೇ ಮೊದಲ ಬಾರಿಗೆ 6,100 ಕೆಜಿ ತೂಕದ ಬೃಹತ್ ಪೇಲೋಡ್ ಅನ್ನು ಹೊತ್ತು ಸಾಗುವ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿಗೆ ಸಾಬೀತುಪಡಿಸಿದೆ. ಈ ಹಿಂದೆ ನವೆಂಬರ್ 2ರಂದು ನಡೆದ ಉಡಾವಣೆಯಲ್ಲಿ ಎಲ್‌ವಿಎಂ3-ಎಂ5 ರಾಕೆಟ್ 4,400 ಕೆಜಿ ತೂಕವನ್ನು ಹೊತ್ತೊಯ್ದಿತ್ತು. ಈ ಬಾರಿ ಆ ಮಿತಿಯನ್ನು ಮೀರಿ ಹೊಸ ದಾಖಲೆ ಬರೆಯಲಾಗಿದೆ.

ಏನಿದು ಬ್ಲೂಬರ್ಡ್ ಬ್ಲಾಕ್-2 ವಿಶೇಷತೆ ?

ಅಂತರರಾಷ್ಟ್ರೀಯ ಸಹಭಾಗಿತ್ವ

ಈ ಯೋಜನೆಯು ಇಸ್ರೋದ ವಾಣಿಜ್ಯ ಅಂಗವಾದ ‘ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್’ (NSIL) ಮತ್ತು ಅಮೆರಿಕ ಮೂಲದ ‘ಎಎಸ್‌ಟಿ ಸ್ಪೇಸ್‌ಮೊಬೈಲ್’ (AST SpaceMobile) ನಡುವೆ ನಡೆದ ಖಾಸಗಿ ಒಪ್ಪಂದದ ಫಲವಾಗಿದೆ. ಅಮೆರಿಕದ ಕಂಪನಿಯು ಬಾಹ್ಯಾಕಾಶ ಆಧಾರಿತ ಸೆಲ್ಯುಲಾರ್ ನೆಟ್‌ವರ್ಕ್ ನಿರ್ಮಿಸಲು ಇಸ್ರೋದ ವಿಶ್ವಾಸಾರ್ಹತೆಯನ್ನು ಆಯ್ದುಕೊಂಡಿರುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.

ಉಡಾವಣೆಯ ಪ್ರಕ್ರಿಯೆ

ಲಿಕ್ವಿಡ್ ಪ್ರೊಪಲ್ಸನ್ ಸಿಸ್ಟಮ್ ಸೆಂಟರ್ (LPSC) ಅಭಿವೃದ್ಧಿಪಡಿಸಿದ ಈ ರಾಕೆಟ್ ಉಡಾವಣೆಯಾದ 15 ನಿಮಿಷಗಳಲ್ಲೇ ಉಪಗ್ರಹವನ್ನು ಯಶಸ್ವಿಯಾಗಿ ಬೇರ್ಪಡಿಸಿ ನಿಗದಿತ ಕಕ್ಷೆಗೆ ಸೇರಿಸಿದೆ. ಉಡಾವಣೆಯ ಪ್ರತಿ ಹಂತವೂ ಇಸ್ರೋ ವಿಜ್ಞಾನಿಗಳು ನಿರೀಕ್ಷಿಸಿದಂತೆಯೇ ನಡೆದಿದೆ ಎಂದು ಇಸ್ರೋ ತಿಳಿಸಿದೆ.

ಇಸ್ರೋದ ಈ ಯಶಸ್ಸು ಜಾಗತಿಕ ವಾಣಿಜ್ಯ ಉಡಾವಣಾ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಹೆಚ್ಚಿನ ನಿಖರತೆಯೊಂದಿಗೆ ಭಾರೀ ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯ ಭಾರತಕ್ಕಿದೆ ಎಂದು ಈ ಯೋಜನೆ ಮತ್ತೊಮ್ಮೆ ತೋರಿಸಿಕೊಟ್ಟಿದೆ.

Exit mobile version