ಪಿಎಸ್‌ಎಲ್‌ವಿ-ಸಿ62 ಮಿಷನ್ ವಿಫಲ: ಬಾಹ್ಯಾಕಾಶದಲ್ಲಿ ದಿಕ್ಕಾಪಾಲಾದ 16 ಉಪಗ್ರಹಗಳು

Untitled design 2026 01 12T131910.464

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅತ್ಯಂತ ಭರವಸೆಯಿಂದ ಕೈಗೊಂಡಿದ್ದ PSLV-C62 ಉಡಾವಣಾ ಪ್ರಕ್ರಿಯೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಭಾನುವಾರ ಮಧ್ಯಾಹ್ನದಿಂದ ಆರಂಭವಾದ ಕೌಂಟ್‌ಡೌನ್ ಬಳಿಕ, ಸೋಮವಾರ ಬೆಳಿಗ್ಗೆ ಉಡಾವಣೆಯಾದ 260 ಟನ್ ತೂಕದ ಈ ರಾಕೆಟ್‌ನಲ್ಲಿದ್ದ ‘ಅನ್ವೇಷ’ ಸೇರಿದಂತೆ ಎಲ್ಲಾ 16 ಉಪಗ್ರಹಗಳು ಕಕ್ಷೆ ಸೇರುವಲ್ಲಿ ವಿಫಲವಾಗಿದ್ದು, ಇಸ್ರೋ ವಿಜ್ಞಾನಿಗಳಲ್ಲಿ ಕಳವಳ ಮೂಡಿಸಿದೆ.

ಸೋಮವಾರ ಬೆಳಿಗ್ಗೆ 10:17ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ62 ಗಗನಕ್ಕೆ ಚಿಮ್ಮಿತು. ಮೊದಲ ಮತ್ತು ಎರಡನೇ ಹಂತದ ಕಾರ್ಯಾಚರಣೆಗಳು ನಿಗದಿತ ಸಮಯಕ್ಕೆ ನಡೆದವು. ದೇಶದಾದ್ಯಂತ ಬಾಹ್ಯಾಕಾಶ ಪ್ರಿಯರು ಈ ಕ್ಷಣವನ್ನು ಸಂಭ್ರಮದಿಂದ ವೀಕ್ಷಿಸುತ್ತಿದ್ದರು. ಆದರೆ, ಮೂರನೇ ಹಂತದ ಕಾರ್ಯಾಚರಣೆಯ ಅಂತ್ಯದಲ್ಲಿ ತಾಂತ್ರಿಕ ಅಡಚಣೆಗಳು ಶುರುವಾದವು. ನಾಲ್ಕನೇ ಹಂತಕ್ಕೆ ತಲುಪುವಷ್ಟರಲ್ಲಿ ರಾಕೆಟ್‌ನೊಂದಿಗಿನ ಸಂಪರ್ಕ ಕಡಿತಗೊಂಡಿದ್ದು, ಅದರಲ್ಲಿದ್ದ ಎಲ್ಲಾ 16 ಉಪಗ್ರಹಗಳು ನಿಗದಿತ ಕಕ್ಷೆ ತಲುಪದೆ ದಿಕ್ಕಾಪಾಲಾಗಿವೆ.

ಈ ವೈಫಲ್ಯದ ಬಗ್ಗೆ ಪ್ರಾಥಮಿಕ ಪ್ರತಿಕ್ರಿಯೆ ನೀಡಿರುವ ಇಸ್ರೋ ಅಧ್ಯಕ್ಷ ವಿ.ನಾರಾಯಣನ್ ಅವರು, ಮೂರನೇ ಹಂತದ ಅಂತ್ಯದವರೆಗೆ ರಾಕೆಟ್‌ನ ಕಾರ್ಯಕ್ಷಮತೆ ತೃಪ್ತಿಕರವಾಗಿತ್ತು. ಆದರೆ ತದನಂತರ ಹಾರಾಟದ ಮಾರ್ಗದಲ್ಲಿ ಅನಿರೀಕ್ಷಿತ ಬದಲಾವಣೆ ಮತ್ತು ಅಡಚಣೆಗಳು ಉಂಟಾದವು. ಸದ್ಯ ನಾವು ಲಭ್ಯವಿರುವ ಡೇಟಾವನ್ನು ಸಂಪೂರ್ಣವಾಗಿ ವಿಶ್ಲೇಷಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ನಡೆದ PSLV-C61 ಮಿಷನ್‌ನಲ್ಲೂ ಕಕ್ಷೆಯ ಅಳವಡಿಕೆಯಲ್ಲಿ ಸಮಸ್ಯೆ ಎದುರಾಗಿತ್ತು, ಈಗ ಅದೇ ಮಾದರಿಯ ವೈಫಲ್ಯ ಮರುಕಳಿಸಿರುವುದು ಸಂಶೋಧನಾ ವಲಯದಲ್ಲಿ ಆತಂಕ ಮೂಡಿಸಿದೆ.

ಈ ಮಿಷನ್‌ನ ಪ್ರಮುಖ ಆಕರ್ಷಣೆಯಾದ ಡಿಆರ್‌ಡಿಒ (DRDO) ಅಭಿವೃದ್ಧಿಪಡಿಸಿದ್ದ ‘ಅನ್ವೇಷ’ ಉಪಗ್ರಹ, ಇದನ್ನು ಭಾರತದ ಸೂಪರ್ ವಿಷನ್ ಕಣ್ಣು ಎಂದು ಕರೆಯಲಾಗುತ್ತಿತ್ತು. ಭೂಮಿಯಿಂದ 600 ಕಿಲೋಮೀಟರ್ ದೂರದ ಸೂರ್ಯ-ಸಿಂಕ್ರೋನಸ್ ಪೋಲಾರ್ ಆರ್ಬಿಟ್‌ನಲ್ಲಿ (SSO) ಇದನ್ನು ನೆಲೆಗೊಳಿಸುವ ಗುರಿ ಇತ್ತು. ಇದರೊಂದಿಗೆ ಥಾಯ್ಲೆಂಡ್ ಮತ್ತು ಯುಕೆ ನಿರ್ಮಿಸಿದ ಭೂ ವೀಕ್ಷಣಾ ಉಪಗ್ರಹಗಳು ಹಾಗೂ ಇತರ 13 ಸಣ್ಣ ಉಪಗ್ರಹಗಳೂ ಕೂಡ ಈ ಕಾರ್ಯಾಚರಣೆಯಲ್ಲಿ ಸೇರಿದ್ದವು. ಆದರೆ ಈ ಉಪಗ್ರಹಗಳು ಸದ್ಯ ದಿಕ್ಕಾಪಾಲಾಗಿವೆ.

ವಾಣಿಜ್ಯಿಕವಾಗಿ ಮತ್ತು ತಾಂತ್ರಿಕವಾಗಿ ಇಸ್ರೋಗೆ ಈ ಮಿಷನ್ ಅತ್ಯಂತ ಪ್ರಮುಖವಾಗಿತ್ತು. ವಿದೇಶಿ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇಸ್ರೋ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಹಿಡಿತ ಸಾಧಿಸುತ್ತಿತ್ತು. ಈ ವೈಫಲ್ಯವು ಮುಂದಿನ ಗಗನಯಾನ ಮತ್ತು ಇತರ ಪ್ರಮುಖ ಯೋಜನೆಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Exit mobile version