ತೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಕುರಿತಾಗಿ ದೊಡ್ಡ ಬೆಳವಣಿಗೆ ನಡೆದಿದೆ ಎಂಬ ವರದಿಗಳು ಹೊರಬಿದ್ದಿವೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಖಮೇನಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಇಸ್ರೇಲ್ ವಾಯುಪಡೆ ಅಧಿಕೃತ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ದಾಳಿ ನಡೆದ ಕ್ಷಣಗಳ ದೃಶ್ಯಗಳೆಂದು ಹೇಳಲಾಗಿದೆ.
ಇಸ್ರೇಲ್ ವಾಯುಸೇನೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ, ಟೆಹರಾನ್‌ನ ಕೇಂದ್ರ ಭಾಗದಲ್ಲಿರುವ ಆಡಳಿತ ಸಮುಚ್ಚಯದ ಮೇಲೆ ನಿಖರವಾದ ವೈಮಾನಿಕ ದಾಳಿ ನಡೆಸಿರುವುದು ಕಾಣುತ್ತದೆ.. ಕಟ್ಟಡ ಸಂಪೂರ್ಣವಾಗಿ ಧ್ವಂಸವಾಗುವ ದೃಶ್ಯಗಳು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ. ಈ ದಾಳಿಯು ಇರಾನ್ ರಾಜಕೀಯ ವಲಯದಲ್ಲಿ ಭಾರೀ ಆಘಾತವನ್ನುಂಟುಮಾಡಿದೆ ಎನ್ನಲಾಗಿದೆ. ಖಮೇನಿ ಇರಾನ್‌ನ ಅತ್ಯುನ್ನತ ಧಾರ್ಮಿಕ ಹಾಗೂ ರಾಜಕೀಯ ನಾಯಕನಾಗಿದ್ದು, ದೇಶದ ನೀತಿ-ನಿರ್ಧಾರಗಳಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಟೆಹರಾನ್‌ನಲ್ಲಿರುವ ಆಡಳಿತ ಕೇಂದ್ರವೇ ಗುರಿಯಾಗಿತ್ತು ಎಂಬ ಮಾಹಿತಿ ಹೊರಬಂದಿದ್ದು, ದಾಳಿಯನ್ನು ಅತ್ಯಂತ ನಿಖರವಾಗಿ ಯೋಜಿಸಲಾಗಿತ್ತು ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ಹಲವು ವಾರಗಳ ಗುಪ್ತಚರ ಮಾಹಿತಿ ಸಂಗ್ರಹಣೆಯ ಬಳಿಕ ಈ ಕಾರ್ಯಾಚರಣೆ ನಡೆದಿರಬಹುದು ಎಂದು ಊಹಿಸಲಾಗಿದೆ.
ಇದಕ್ಕೆ ಪ್ರತಿಯಾಗಿ ಇರಾನ್ ತೀವ್ರ ಪ್ರತಿಕ್ರಿಯೆ ನೀಡಿದ್ದು, ತನ್ನ ವಿರೋಧಿ ರಾಷ್ಟ್ರಗಳ ವಿರುದ್ಧ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ಮುಂದುವರಿಸಿದೆ ಎಂಬ ವರದಿಗಳು ಕೇಳಿಬರುತ್ತಿವೆ. ಮಧ್ಯಪ್ರಾಚ್ಯದಲ್ಲಿ ಈಗಾಗಲೇ ತೀವ್ರಗೊಂಡಿರುವ ಸಂಘರ್ಷ ಈ ಬೆಳವಣಿಗೆಯಿಂದ ಮತ್ತಷ್ಟು ಉಗ್ರ ಸ್ವರೂಪ ಪಡೆದುಕೊಂಡಿದೆ. ಹಲವಾರು ದೇಶಗಳು ತಮ್ಮ ನಾಗರಿಕರಿಗೆ ಎಚ್ಚರಿಕೆ ಸೂಚನೆ ನೀಡಿದ್ದು, ವೈಮಾನಿಕ ಮಾರ್ಗಗಳನ್ನೂ ಕೆಲವು ಕಡೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
