ಟೆಲ್ ಅವಿವ್, ಮಾರ್ಚ್ 8: ಇಸ್ರೇಲ್ ಸೇನೆಯು (IDF) ಲೆಬನಾನ್‌ನಲ್ಲಿ ಒಂದು ವಿಚಿತ್ರ ಮತ್ತು ಅಚ್ಚರಿಯ ಕಾರ್ಯಾಚರಣೆಯನ್ನು ನಡೆಸಿದೆ. ಸುಮಾರು 40 ವರ್ಷಗಳ ಹಿಂದೆ ನಾಪತ್ತೆಯಾದ ತನ್ನ ವಾಯುಪಡೆಯ ನ್ಯಾವಿಗೇಟರ್ ಅನ್ನು ಹುಡುಕುವ ಸಲುವಾಗಿ ಇಸ್ರೇಲ್ ಸೇನೆಯು ಲೆಬನಾನ್‌ನ ಒಳಭಾಗದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದೆ.
1986ರಲ್ಲಿ ಇಸ್ರೇಲ್ ವಾಯುಪಡೆಯ ನ್ಯಾವಿಗೇಟರ್ ಆಗಿದ್ದ ರಾನ್ ಅರಾದ್ ಎಂಬ ಯೋಧ ಲೆಬನಾನ್‌ನಲ್ಲಿ ನಡೆದ ಸೈನಿಕ ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದರು. ಆ ಸಮಯದಲ್ಲಿ ಅವರು ಹಾರುತ್ತಿದ್ದ ಯುದ್ಧವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಪತನಗೊಂಡಿತ್ತು ಎಂದು ವರದಿಗಳು ತಿಳಿಸಿವೆ. ವಿಮಾನ ಪತನವಾಗುತ್ತಿದ್ದಾಗ ರಾನ್ ಅರಾದ್ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಧರೆಗೆ ಇಳಿದಿದ್ದರು ಎಂಬ ಮಾಹಿತಿ ಕೂಡ ದೊರಕಿತ್ತು. ಆದರೆ ನಂತರ ಅವರು ಏನಾದರು ಎಂಬುದು ರಹಸ್ಯವಾಗಿಯೇ ಉಳಿದುಬಿಟ್ಟಿತ್ತು.
ಆ ಸಂದರ್ಭದಲ್ಲಿ ಲೆಬನಾನ್‌ನ ಕೆಲವು ಸಶಸ್ತ್ರ ಗುಂಪುಗಳು ರಾನ್ ಅರಾದ್ ಅವರನ್ನು ಬಂಧಿಸಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಬಳಿಕ ಕೆಲ ವರ್ಷಗಳ ನಂತರ ಅವರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಮೂಲಗಳಿಂದ ಮಾಹಿತಿ ಹೊರಬಂದಿತ್ತು.
ಈ ಹಿನ್ನೆಲೆ ಇಸ್ರೇಲ್ ಸೇನೆ ಈಗ ಮತ್ತೊಮ್ಮೆ ರಾನ್ ಅರಾದ್ ಅವರನ್ನು ಹುಡುಕಲು ಲೆಬನಾನ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದೆ. ಇಸ್ರೇಲ್ ರಕ್ಷಣಾ ಪಡೆ (IDF) ಯೋಧರು ಹೆಲಿಕಾಪ್ಟರ್ ಮೂಲಕ ಲೆಬನಾನ್‌ನ ನಬಿ ಎಂಬ ಗ್ರಾಮಕ್ಕೆ ಬಂದಿಳಿದರು. ಈ ಗ್ರಾಮದಲ್ಲಿ ರಾನ್ ಅರಾದ್ ಅವರನ್ನು ಸಮಾಧಿ ಮಾಡಲಾಗಿದೆ ಎಂಬ ಮಾಹಿತಿ ಇಸ್ರೇಲ್ ಗುಪ್ತಚರ ಇಲಾಖೆಗೆ ದೊರೆತಿತ್ತು.
ಅದರ ಆಧಾರದಲ್ಲಿ ರಾತ್ರಿ ವೇಳೆ ನಡೆದ ಈ ರಹಸ್ಯ ಕಾರ್ಯಾಚರಣೆಯಲ್ಲಿ ಇಸ್ರೇಲ್ ಯೋಧರು ಆ ಗ್ರಾಮದಲ್ಲಿರುವ ಸಮಾಧಿಯನ್ನು ಅಗೆದು ಪರಿಶೀಲಿಸಿದರು. ಆದರೆ ಆ ಸಮಾಧಿಯಲ್ಲಿ ರಾನ್ ಅರಾದ್ ಅವರ ಮೃತದೇಹ ಪತ್ತೆಯಾಗಿಲ್ಲ. ಇದರಿಂದ ಅವರು ಏನಾದ್ರೂ ಎಂಬುದರ ಕುರಿತು ಅನುಮಾನಗಳು ಮೂಡಿವೆ.
ಈ ಘಟನೆ ಕುರಿತು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ದೇಶದ ಯೋಧರು ಎಲ್ಲಿಯೇ ಇದ್ದರೂ ಅವರನ್ನು ಮರೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. ನಮ್ಮ ಯೋಧರ ರಕ್ಷಣೆಗಾಗಿ ಮತ್ತು ಅವರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲು ನಾವು ಯಾವ ಹಂತವನ್ನಾದರೂ ತಲುಪಲು ಸಿದ್ಧವಿದ್ದೇವೆ ಎಂದು ನೆತನ್ಯಾಹು ತಿಳಿಸಿದ್ದಾರೆ.
“ನಮ್ಮ ಯೋಧ ರಾನ್ ಅರಾದ್ ನಾಪತ್ತೆಯಾಗಿದ್ದಾನೆ, ಮೃತಪಟ್ಟಿಲ್ಲ. ಅವನ ಬಗ್ಗೆ ಸತ್ಯ ಹೊರಬರುವವರೆಗೆ ನಾವು ಹುಡುಕಾಟ ಮುಂದುವರಿಸುತ್ತೇವೆ,” ಎಂದು ಅವರು ಹೇಳಿದ್ದಾರೆ.
