ನವದೆಹಲಿ: ಭಾರತದ ಪ್ರತಿಯೊಬ್ಬ ನಾಗರಿಕನ ಅತೀ ಮುಖ್ಯ ಗುರುತಿನ ಚೀಟಿಯಾದ ‘ಆಧಾರ್’ (Aadhaar) ಸುರಕ್ಷತೆಯ ಕುರಿತು ಎದ್ದಿದ್ದ ಅನುಮಾನಗಳಿಗೆ ಕೇಂದ್ರ ಸರ್ಕಾರ ತೆರೆ ಎಳೆದಿದೆ. ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (UIDAI) ಡೇಟಾಬೇಸ್‌ನಿಂದ ಯಾವುದೇ ಮಾಹಿತಿಯು ಸೋರಿಕೆಯಾಗಿಲ್ಲ ಮತ್ತು ಆಧಾರ್ ವ್ಯವಸ್ಥೆಯು ಅತ್ಯಂತ ಭದ್ರವಾಗಿದೆ ಎಂದು ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದೆ.
ಸಚಿವ ಜಿತಿನ್ ಪ್ರಸಾದ್ ಸ್ಪಷ್ಟನೆ
ಬುಧವಾರ ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ಜಿತಿನ್ ಪ್ರಸಾದ್, ಆಧಾರ್ ಡೇಟಾ ಸುರಕ್ಷತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿದ್ದಾರೆ. ಸರ್ಕಾರವು ರೂಪಿಸಿರುವ ಬಲವಾದ ತಾಂತ್ರಿಕ ಮತ್ತು ಸಾಂಸ್ಥಿಕ ಭದ್ರತಾ ಕ್ರಮಗಳಿಂದಾಗಿ ಆಧಾರ್ ದತ್ತಾಂಶವು ಸುರಕ್ಷಿತವಾಗಿದೆ. ಇದುವರೆಗೆ ಯುಐಡಿಎಐ ಡೇಟಾಬೇಸ್‌ನಿಂದ ಯಾವುದೇ ರೀತಿಯ ಡೇಟಾ ಸೋರಿಕೆ ಅಥವಾ ಡೇಟಾ ಉಲ್ಲಂಘನೆಯಾದ (Data Breach) ನಿದರ್ಶನಗಳಿಲ್ಲ ಎಂದು ಸಚಿವ ಜಿತೀಶ್ ತಿಲೀಸಿದ್ದಾರೆ.
ವಿಶ್ವದ ಅತಿದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆ
ಪ್ರಸ್ತುತ ಭಾರತದಲ್ಲಿ ಸುಮಾರು 134 ಕೋಟಿಗೂ ಹೆಚ್ಚು ಜನರು ಆಧಾರ್ ಕಾರ್ಡ್ ಹೊಂದಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಕೇವಲ ಗುರುತಿನ ಚೀಟಿಯಾಗಿ ಮಾತ್ರವಲ್ಲದೆ, ಇದುವರೆಗೆ 16,000 ಕೋಟಿಗೂ ಅಧಿಕ ದೃಢೀಕರಣ (Authentication) ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಪಾರದರ್ಶಕ ಆಡಳಿತ ಮತ್ತು ಸಬ್ಸಿಡಿಗಳ ನೇರ ವರ್ಗಾವಣೆಯಲ್ಲಿ (DBT) ಆಧಾರ್ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಸುಧಾರಿತ ಎನ್‌ಕ್ರಿಪ್ಶನ್ ತಂತ್ರಜ್ಞಾನ
ವೈಯಕ್ತಿಕ ಡೇಟಾವನ್ನು ರಕ್ಷಿಸಲು ಯುಐಡಿಎಐ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುತ್ತಿದೆ. ಡೇಟಾವನ್ನು ರಕ್ಷಿಸಲು ಅನೇಕ ಹಂತದ ಭದ್ರತಾ ಗೋಡೆಗಳನ್ನು ನಿರ್ಮಿಸಲಾಗಿದೆ.
ಎನ್‌ಕ್ರಿಪ್ಶನ್: ಡೇಟಾ ಸಂಗ್ರಹಣೆ ಮತ್ತು ವರ್ಗಾವಣೆಯ ಸಮಯದಲ್ಲಿ ಸುಧಾರಿತ ಎನ್‌ಕ್ರಿಪ್ಶನ್ ತಂತ್ರಜ್ಞಾನ ಬಳಕೆಯಾಗುತ್ತಿರುವುದರಿಂದ ಮಾಹಿತಿ ಸೋರಿಕೆ ಸಾಧ್ಯವಿಲ್ಲ.
ಕಟ್ಟುನಿಟ್ಟಿನ ನಿಯಮ: ವೈಯಕ್ತಿಕ ಮಾಹಿತಿ ರಕ್ಷಣೆಗೆ ಕಟ್ಟುನಿಟ್ಟಾದ ಕಾನೂನು ಚೌಕಟ್ಟುಗಳನ್ನು ಅಳವಡಿಸಿಕೊಳ್ಳಲಾಗಿದೆ.
ನಿರಂತರ ಕಣ್ಣಾವಲು: ಈ ಇಡೀ ಪ್ರಕ್ರಿಯೆಯು ‘ರಾಷ್ಟ್ರೀಯ ನಿರ್ಣಾಯಕ ಮಾಹಿತಿ ಮೂಲಸೌಕರ್ಯ ರಕ್ಷಣಾ ಕೇಂದ್ರದ (NCIIPC) ನಿರಂತರ ಮೇಲ್ವಿಚಾರಣೆಯಲ್ಲಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ವಂಚನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಧಾರ್ ಕಾರ್ಡ್ ಮಾಹಿತಿಯ ಸುರಕ್ಷತೆಯ ಬಗ್ಗೆ ಜನರಲ್ಲಿ ಆತಂಕವಿತ್ತು. ಆದರೆ ಸರ್ಕಾರದ ಈ ಅಧಿಕೃತ ಸ್ಪಷ್ಟನೆಯು ನಾಗರಿಕರಲ್ಲಿ ಹೊಸ ಭರವಸೆ ಮೂಡಿಸಿದೆ.
