ಟೆಹ್ರಾನ್ : ಇರಾನ್ ಹಾಗೂ ಅಮೆರಿಕಾ ನಡುವಿನ ಭೀಕರ ಸಂಘರ್ಷ ಆರಂಭವಾಗಿ ತಿಂಗಳು ಕಳೆದರೂ ಶಾಂತಿಯ ಲಕ್ಷಣಗಳು ಕಾಣುತ್ತಿಲ್ಲ. ಉಭಯ ರಾಷ್ಟ್ರಗಳ ಪಟ್ಟು ಸಡಿಲಿಕೆಯಾಗದ ಹಿನ್ನೆಲೆಯಲ್ಲಿ ಜಗತ್ತು ಆತಂಕದಲ್ಲಿದೆ. ಈ ಮಧ್ಯೆ, ಸಂಘರ್ಷಕ್ಕೆ ಅಂತ್ಯ ಹಾಡಲು ಭಾರತದ ಮಧ್ಯಸ್ಥಿಕೆಯನ್ನು ಇರಾನ್ ಬಯಸಿದೆ ಎಂಬ ಮಹತ್ವದ ಬೆಳವಣಿಗೆ ವರದಿಯಾಗಿದೆ.
ಜಾಗತಿಕ ತೈಲ ಮಾರುಕಟ್ಟೆಗೆ ಬಿಸಿ
ಯುದ್ಧದ ಪರಿಣಾಮವಾಗಿ ಭಾರತ, ಶ್ರೀಲಂಕಾ ಮತ್ತು ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ತೈಲ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಅನಿಲದ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರು ಜೀವನ ನಿರ್ವಹಣೆಗೆ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆರ್ಥಿಕ ಚಟುವಟಿಕೆಗಳ ಮೇಲೆ ಈ ಯುದ್ಧವು ಭಾರಿ ಹೊಡೆತ ನೀಡುತ್ತಿದೆ.
ಚೀನಾ ಮತ್ತು ರಷ್ಯಾ ಸೇರಿದಂತೆ ಹಲವು ಪ್ರಬಲ ರಾಷ್ಟ್ರಗಳು ಯುದ್ಧ ವಿರಾಮಕ್ಕೆ ಕರೆ ನೀಡಿದ್ದರೂ, ಅಮೆರಿಕಾ ಮತ್ತು ಇರಾನ್ ಈ ಬಗ್ಗೆ ಕಿವಿಗೊಟ್ಟಿರಲಿಲ್ಲ. ಇನ್ನು ನೆರೆಯ ರಾಷ್ಟ್ರ ಪಾಕಿಸ್ತಾನ ಕೂಡ ಸಂಧಾನದ ಪ್ರಯತ್ನ ನಡೆಸಿತ್ತಾದರೂ, ಉಭಯ ದೇಶಗಳು ಪಾಕಿಸ್ತಾನದ ಮೇಲೆ ನಂಬಿಕೆ ಇಡದ ಕಾರಣ ಆ ಪ್ರಯತ್ನವು ಹಳ್ಳ ಹಿಡಿದಿತ್ತು.
ಭಾರತದತ್ತ ಮುಖ ಮಾಡಿದ ಇರಾನ್ !
ಇರಾನ್‌ನ ಪ್ರಮುಖ ನಾಯಕರನ್ನು ಗುರಿಯಾಗಿಸಿಕೊಂಡು ಅಮೆರಿಕಾ ನಡೆಸಿದ ದಾಳಿಯು ಇರಾನ್ ಅನ್ನು ಕುಗ್ಗಿಸುತ್ತದೆ ಎಂಬ ಲೆಕ್ಕಾಚಾರವಿತ್ತು. ಆದರೆ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಅಮೆರಿಕಾ ಮತ್ತು ಇಸ್ರೇಲ್‌ಗೆ ಪ್ರತಿರೋಧ ಒಡ್ಡುತ್ತಿರುವುದು ಯುದ್ಧದ ದಿಕ್ಕನ್ನೇ ಬದಲಿಸಿದೆ. ಈ ನಿರ್ಣಾಯಕ ಹಂತದಲ್ಲಿ, ಹೌತಿ ಬಂಡುಕೋರರು ಹಾಗೂ ಇರಾನ್ ಆಡಳಿತವು ಭಾರತವನ್ನು ಸಂಧಾನಕ್ಕಾಗಿ ಆಹ್ವಾನಿಸಿದೆ ಎನ್ನಲಾಗುತ್ತಿದೆ. ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಹಾಗೂ ಉಭಯ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ, ಈ ಆಹ್ವಾನಕ್ಕೆ ಯಾವ ರೀತಿ ಪ್ರತಿಕ್ರಿಯಿಸಲಿದೆ ಎಂಬುದು ಈಗ ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.
