ಖಮೇನಿ ನಿಧನದ ಬಳಿಕ ಇರಾನ್‌ಗೆ ಹೊಸ ಚುಕ್ಕಾಣಿ: ಅಯತೊಲ್ಲಾ ಅರಾಫಿನಿಗೆ ಸರ್ವೋಚ್ಚ ನಾಯಕನ ಪಟ್ಟ

Untitled design 2026 03 01T162600.344

ತೆಹ್ರಾನ್: ಇರಾನ್‌ನ ದೀರ್ಘಕಾಲದ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (86) ಅವರ ನಿಧನದ ಬೆನ್ನಲ್ಲೇ, ದೇಶದ ಅತ್ಯುನ್ನತ ಧಾರ್ಮಿಕ ಮತ್ತು ರಾಜಕೀಯ ಸ್ಥಾನಕ್ಕೆ ಹಿರಿಯ ಧಾರ್ಮಿಕ ವಿದ್ವಾಂಸ ಅಯತೊಲ್ಲಾ ಅರಾಫಿ ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಖಮೇನಿ ಹುತಾತ್ಮರಾದ ಬೆನ್ನಲ್ಲೇ ಇರಾನ್‌ನ ಪ್ರಭಾವಶಾಲಿ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ತುರ್ತು ಸಭೆ ಸೇರಿ ಈ ನಿರ್ಧಾರ ಕೈಗೊಂಡಿದೆ..

ಖಮೇನಿ ಅವರ ನಿಧನದ ಬೆನ್ನಲ್ಲೇ ದೇಶದಲ್ಲಿ ಅಸ್ಥಿರತೆ ಉಂಟಾಗುವ ಸಾಧ್ಯತೆಯನ್ನು ಮನಗಂಡು, ಇರಾನ್‌ನ ಪ್ರಭಾವಿ ಧಾರ್ಮಿಕ ಮತ್ತು ರಾಜಕೀಯ ಸಂಸ್ಥೆಯಾದ ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್ ತುರ್ತು ಸಭೆ ನಡೆಸಿತು. ಈ ಸಭೆಯಲ್ಲಿ ಹಿರಿಯ ಧಾರ್ಮಿಕ ಪಂಡಿತರಾದ ಅಯತೊಲ್ಲಾ ಅರಾಫಿ  ಅವರನ್ನು ಮಧ್ಯಂತರ ಸರ್ವೋಚ್ಚ ನಾಯಕನಾಗಿ ನೇಮಕ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು.

ಯಾರು ಈ ಅಯತೊಲ್ಲಾ ಅರಾಫಿ?

ಅಯತೊಲ್ಲಾ ಅರಾಫಿ ಇರಾನ್‌ನ ಧಾರ್ಮಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಅತ್ಯಂತ ಗೌರವಾನ್ವಿತ ವ್ಯಕ್ತಿ. ಹಲವು ವರ್ಷಗಳಿಂದ ಧಾರ್ಮಿಕ ಶಿಕ್ಷಣ ಸಂಸ್ಥೆಗಳ (ಸೇಮಿನಾರಿಗಳ) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿರುವ ಅವರು, ಯುವ ಧಾರ್ಮಿಕ ಪಂಡಿತರ ಮಾರ್ಗದರ್ಶಕರಾಗಿ ಹೆಸರುವಾಸಿಯಾಗಿದ್ದಾರೆ.

ಇರಾನ್‌ನ ಆಡಳಿತ ವ್ಯವಸ್ಥೆಯಲ್ಲಿ ಸರ್ವೋಚ್ಚ ನಾಯಕನ ಸ್ಥಾನ ಅತ್ಯಂತ ಪ್ರಭಾವಶಾಲಿಯಾಗಿದೆ. ರಕ್ಷಣಾ, ನ್ಯಾಯಾಂಗ, ಮಾಧ್ಯಮ, ಪರಮಾಣು ನೀತಿ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಅಂತಿಮ ಮಾತು ಹೇಳುವ ಅಧಿಕಾರ ಈ ಸ್ಥಾನಕ್ಕಿದೆ. ಹೀಗಾಗಿ ಮಧ್ಯಂತರವಾಗಿ ಆದರೂ ಈ ಜವಾಬ್ದಾರಿಯನ್ನು ಅರಾಫಿ ಹೊತ್ತಿರುವುದು ದೇಶದ ಭವಿಷ್ಯಕ್ಕೆ ಮಹತ್ವದ್ದಾಗಿದೆ.

ಖಮೇನಿ ಯುಗದ ಅಂತ್ಯ

ಅಲಿ ಖಮೇನಿ ಅವರು 1989ರಿಂದ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದರು. ಅವರ ಆಡಳಿತಾವಧಿಯಲ್ಲಿ ಇರಾನ್ ಹಲವು ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸಿದರೂ, ಪ್ರಬಲ ಧಾರ್ಮಿಕ ಆಡಳಿತ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿದೆ. ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಕಠಿಣ ನಿಲುವು, ಪರಮಾಣು ಕಾರ್ಯಕ್ರಮದ ಅಭಿವೃದ್ಧಿ ಹಾಗೂ ಪಶ್ಚಿಮ ರಾಷ್ಟ್ರಗಳೊಂದಿಗೆ ಸತತ ಉದ್ವಿಗ್ನತೆ ಇವು ಖಮೇನಿ ಆಡಳಿತದ ಪ್ರಮುಖ ಲಕ್ಷಣಗಳಾಗಿದ್ದವು.

ಅವರ ನಿಧನವು ಇರಾನ್ ಒಳರಾಜಕೀಯದಲ್ಲಷ್ಟೇ ಅಲ್ಲ, ಜಾಗತಿಕ ರಾಜತಾಂತ್ರಿಕ ವಲಯದಲ್ಲಿಯೂ ಕುತೂಹಲ ಹುಟ್ಟಿಸಿದೆ. ಮುಂದಿನ ಸರ್ವೋಚ್ಚ ನಾಯಕ ಯಾರು ಎಂಬ ಚರ್ಚೆ ನಡೆಯುತ್ತಿರುವ ಈ ಹೊತ್ತಿನಲ್ಲಿ, ಅರಾಫಿ ಅವರ ಮಧ್ಯಂತರ ನೇಮಕ ರಾಜಕೀಯ ಸ್ಥಿರತೆಗೆ ನೆರವಾಗಲಿದೆ ಎಂಬ ನಿರೀಕ್ಷೆ ಇದೆ.

ಇಸ್ರೇಲ್ ಮತ್ತು ಅಮೆರಿಕದೊಂದಿಗೆ ಇರಾನ್‌ನ ಸಂಬಂಧಗಳು ಈಗಾಗಲೇ ತೀವ್ರವಾಗಿರುವ ಸಂದರ್ಭದಲ್ಲಿ ಈ ನಾಯಕತ್ವ ಬದಲಾವಣೆ ನಡೆದಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸೈನಿಕ ಮತ್ತು ರಾಜತಾಂತ್ರಿಕ ಚಟುವಟಿಕೆಗಳ ನಡುವೆ ಖಮೇನಿ ಅವರ ಅಗಲಿಕೆ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

Exit mobile version