ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಿಚ್ಚು ವ್ಯಾಪಿಸುತ್ತಿರುವ ಈ ಸಂದಿಗ್ಧ ಸಮಯದಲ್ಲಿ, ಭಾರತವು ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ಅತ್ಯಂತ ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಪಾತ್ರ ವಹಿಸಬಲ್ಲದು ಎಂದು ಟೆಹ್ರಾನ್ ವಿಶ್ವಾಸ ವ್ಯಕ್ತಪಡಿಸಿದೆ. ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫತಾಲಿ ಅವರು ನವದೆಹಲಿಯಲ್ಲಿ ಮಾತನಾಡಿ, ಭಾರತದ ಸಮತೋಲಿತ ವಿದೇಶಾಂಗ ನೀತಿಯು ಜಾಗತಿಕ ಶಾಂತಿಗೆ ಪೂರಕವಾಗಿದೆ ಎಂದು ಶ್ಲಾಘಿಸಿದರು.
ರಾಯಭಾರಿ ಫತಾಲಿ ಅವರ ಪ್ರಕಾರ, ಭಾರತವು ಅಮೆರಿಕ, ಇಸ್ರೇಲ್ ಮತ್ತು ಇರಾನ್-ಮೂರೂ ದೇಶಗಳೊಂದಿಗೆ ಐತಿಹಾಸಿಕ ಹಾಗೂ ಕಾರ್ಯತಂತ್ರದ ಬಾಂಧವ್ಯವನ್ನು ಹೊಂದಿದೆ. ಜಾಗತಿಕ ದಕ್ಷಿಣದ (Global South) ಪ್ರಮುಖ ನಾಯಕನಾಗಿ ಭಾರತವು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸುವಲ್ಲಿ ಮತ್ತು ರಾಜತಾಂತ್ರಿಕ ಮಾರ್ಗಗಳನ್ನು ಬಲಪಡಿಸುವಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಈ ಬಿಕ್ಕಟ್ಟನ್ನು ಹೋಗಲಾಡಿಸಲು ಭಾರತವು ವಿಶ್ವಾಸಾರ್ಹ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲು ಇದು ಅನುವು ಮಾಡಿಕೊಡುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಉದ್ವಿಗ್ನತೆಗೆ ತಾತ್ಕಾಲಿಕ ವಿರಾಮ ಘೋಷಿಸಿ, ಮಾತುಕತೆಗೆ ಬರುವಂತೆ ಟೆಹ್ರಾನ್‌ಗೆ ಆಹ್ವಾನ ನೀಡಿದ್ದಾರೆ. ಸಂಭಾವ್ಯ ಕದನ ವಿರಾಮಕ್ಕಾಗಿ ವಾಷಿಂಗ್ಟನ್ 15 ಅಂಶಗಳ ಯೋಜನೆಯನ್ನು ಪಾಕಿಸ್ತಾನದ ಮಧ್ಯವರ್ತಿಗಳ ಮೂಲಕ ಇರಾನ್‌ಗೆ ರವಾನಿಸಿದೆ ಎಂದು ವರದಿಯಾಗಿದೆ. ಆದರೆ, ಈ ಶಾಂತಿ ಪ್ರಕ್ರಿಯೆಯ ನಡುವೆಯೇ ಅಮೆರಿಕ ತನ್ನ ಪ್ಯಾರಾಟ್ರೂಪರ್‌ಗಳನ್ನು ಕೊಲ್ಲಿ ಪ್ರದೇಶಕ್ಕೆ ಸ್ಥಳಾಂತರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ.
ಒಂದೆಡೆ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿದ್ದರೆ, ಇತ್ತ ಇರಾನ್ ಸೇನೆಯು ಅಮೆರಿಕದ ಪ್ರಸ್ತಾವನೆಯನ್ನು ಅಪಹಾಸ್ಯ ಮಾಡಿದೆ. ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಇಬ್ರಾಹಿಂ ಝೋಲ್ಫಾಘರಿ ಮಾತನಾಡಿ, ನಿಮ್ಮ ಆಂತರಿಕ ಸಂಘರ್ಷಗಳು ನಮ್ಮೊಂದಿಗೆ ಮಾತುಕತೆ ನಡೆಸುವ ಹಂತಕ್ಕೆ ತಲುಪಿವೆಯೇ ? ನಮ್ಮಂತಹವರು ನಿಮ್ಮಂತಹವರ ಜೊತೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಗುಡುಗಿದ್ದಾರೆ. ಜಾಗತಿಕ ಸೂಪರ್ ಪವರ್ ಎಂದು ಹೇಳಿಕೊಳ್ಳುವ ಅಮೆರಿಕದ ಕಾರ್ಯತಂತ್ರದ ಶಕ್ತಿಯು ವೈಫಲ್ಯವಾಗಿ ಮಾರ್ಪಟ್ಟಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಯುದ್ಧವು ಮೊದಲ ತಿಂಗಳ ಅಂತ್ಯವನ್ನು ಸಮೀಪಿಸುತ್ತಿದ್ದಂತೆ, ಇಸ್ರೇಲ್ ಮತ್ತು ಗಲ್ಫ್ ಪ್ರದೇಶದ ಮೇಲೆ ಇರಾನ್ ದಾಳಿಗಳನ್ನು ಚುರುಕುಗೊಳಿಸಿದೆ. ಇತ್ತೀಚೆಗೆ ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಟ್ರಂಪ್ ಆಡಳಿತವು ಈ ಹಿಂದೆ ಮಾತುಕತೆಯ ನಡುವೆಯೇ ದಾಳಿ ಮಾಡಿದ್ದ ಇತಿಹಾಸವಿರುವುದರಿಂದ ಇರಾನ್ ಈಗ ಅಮೆರಿಕವನ್ನು ನಂಬಲು ಸಿದ್ಧವಿಲ್ಲ. ಇಂತಹ ಸನ್ನಿವೇಶದಲ್ಲಿ, ಭಾರತದಂತಹ ತಟಸ್ಥ ಮತ್ತು ಪ್ರಭಾವಶಾಲಿ ದೇಶದ ಮಧ್ಯಸ್ಥಿಕೆ ಅತ್ಯಗತ್ಯ ಎಂದು ವಿಶ್ಲೇಷಿಸಲಾಗುತ್ತಿದೆ.
