ಭಾರತಕ್ಕೆ ಗುಡ್ ನ್ಯೂಸ್: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ LPG ಹಡಗುಗಳಿಗೆ ಇರಾನ್ ಗ್ರೀನ್ ಸಿಗ್ನಲ್

Untitled design 2026 03 14T073926.793

ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳ ನಡುವೆ ಭಾರತಕ್ಕೆ ದೊಡ್ಡ ಮಟ್ಟದ ಸಿಹಿ ಸುದ್ದಿ ಸಿಕ್ಕಿದೆ. ಜಾಗತಿಕ ಇಂಧನ ಪೂರೈಕೆ ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಉಂಟಾಗಿದ್ದ ಬಿಕ್ಕಟ್ಟು ಭಾರತೀಯರ ಪಾಲಿಗೆ ಸಡಿಗೊಂಡಿದೆ. ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಚಾಣಾಕ್ಷ ರಾಜತಾಂತ್ರಿಕ ನಡೆ ಹಾಗೂ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಯಿಂದಾಗಿ, ಭಾರತೀಯ ಎಲ್‌ಪಿಜಿ (LPG) ಟ್ಯಾಂಕರ್‌ಗಳು ಸುಗಮವಾಗಿ ಸಾಗಲು ಇರಾನ್ ಅನುಮತಿ ನೀಡಿದೆ.

ಏನಿದು ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ?

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವ ಹಡಗುಗಳಿಗೆ ಭದ್ರತಾ ಭೀತಿ ಎದುರಾಗಿತ್ತು. ಜಗತ್ತಿನ ಒಟ್ಟು ಎಲ್‌ಪಿಜಿ ಪೂರೈಕೆಯಲ್ಲಿ ಬಹುಪಾಲು ಈ ಮಾರ್ಗದ ಮೂಲಕವೇ ಸಾಗುತ್ತದೆ. ಇರಾನ್ ಈ ಮಾರ್ಗದಲ್ಲಿ ನಿರ್ಬಂಧ ಹೇರಿದ್ದಲ್ಲಿ ಭಾರತದಲ್ಲಿ ಅಡುಗೆ ಅನಿಲದ ತೀವ್ರ ಕೊರತೆ ಉಂಟಾಗುವ ಸಾಧ್ಯತೆಯಿತ್ತು. ಆದರೆ, ಭಾರತವು ಸಮಯಪ್ರಜ್ಞೆಯಿಂದ ಇರಾನ್‌ ಜೊತೆಗಿನ ಮಾತುಕತೆಗಳು ಈಗ ಫಲ ನೀಡಿವೆ.

ಜೈಶಂಕರ್ ಅವರ ಫೋನ್ ಕಾಲ್ 

ವಿದೇಶಾಂಗ ಸಚಿವ ಎಸ್‌. ಜೈಶಂಕ‌ರ್ ಅವರು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ನಿ ಅವರೊಂದಿಗೆ ಸತತ ಮೂರ್ನಾಲ್ಕು ಸುತ್ತಿನ ಸುದೀರ್ಘ ದೂರವಾಣಿ ಮಾತುಕತೆಗಳನ್ನು ನಡೆಸಿದ್ದರು. ಕೇವಲ ಅಧಿಕಾರಿಗಳ ಮಟ್ಟದಲ್ಲಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರು ಖುದ್ದಾಗಿ ಇರಾನ್ ಅಧ್ಯಕ್ಷರೊಂದಿಗೆ ಚರ್ಚಿಸಿ ಭಾರತದ ಹಿತಾಸಕ್ತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರು. ಈ ಉನ್ನತ ಮಟ್ಟದ ಸಂವಾದದ ಬೆನ್ನಲ್ಲೇ ಇರಾನ್ ಸರ್ಕಾರ ಭಾರತೀಯ ಹಡಗುಗಳಿಗೆ ರಕ್ಷಣೆ ನೀಡಲು ಒಪ್ಪಿಕೊಂಡಿದೆ.

‘ಶಿವಾಲಿಕ್’ ಹಡಗಿನ ಸುರಕ್ಷಿತ ಪ್ರಯಾಣ

ಸುಮಾರು 40,000 ಮೆಟ್ರಿಕ್ ಟನ್ ಅಡುಗೆ ಅನಿಲವನ್ನು ಹೊತ್ತಿದ್ದ ‘ಶಿವಾಲಿಕ್’ ಬೃಹತ್ ಹಡಗು ಈಗಾಗಲೇ ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿ ಭಾರತದತ್ತ ಸಾಗಿದೆ. ಇದರ ಬೆನ್ನಲ್ಲೇ ‘ಪುಷ್ಪಕ್’ ಮತ್ತು ‘ಪರಿಮಳ್’ ಎಂಬ ಇತರ ಎರಡು ಟ್ಯಾಂಕರ್‌ಗಳಿಗೂ ಇರಾನ್ ನೌಕಾಪಡೆ ಸುರಕ್ಷಿತ ಮಾರ್ಗವನ್ನು ಕಲ್ಪಿಸಿದೆ. ಈ ಹಡಗುಗಳು ಭಾರತ ತಲುಪುವುದರಿಂದ ದೇಶದ ಎಲ್‌ಪಿಜಿ ದಾಸ್ತಾನು ಸುಸ್ಥಿತಿಗೆ ಬರಲಿದೆ.

ಭಾರತ ನಮ್ಮ ಆಪ್ತ ಮಿತ್ರ

ಈ ಬೆಳವಣಿಗೆಯ ಕುರಿತು ಮಾತನಾಡಿರುವ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ, ಭಾರತ ಮತ್ತು ಇರಾನ್ ಐತಿಹಾಸಿಕ ಸಂಬಂಧವನ್ನು ಹೊಂದಿವೆ. ಭಾರತವು ನಮ್ಮ ನಂಬಿಕಸ್ತ ಮಿತ್ರ ರಾಷ್ಟ್ರವಾಗಿದ್ದು, ಸಂಕಷ್ಟದ ಸಮಯದಲ್ಲಿ ಪರಸ್ಪರ ಹಿತಾಸಕ್ತಿಗಳನ್ನು ಕಾಪಾಡುವುದು ನಮ್ಮ ಆದ್ಯತೆ. ಆದ್ದರಿಂದ ಭಾರತೀಯ ಹಡಗುಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ನಾವು ಬದ್ಧರಿದ್ದೇವೆ ಎಂದು ಹೇಳಿದ್ದಾರೆ.

Exit mobile version