ಪಾಟ್ನಾದಲ್ಲಿ ತಪ್ಪಿದ ಭಾರೀ ದುರಂತ: ಇಂಡಿಗೋ ಸೇಫ್ ಲ್ಯಾಂಡಿಂಗ್!

ಇಂಡಿಗೋ ಪೈಲಟ್​ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

0

ಪಾಟ್ನಾ: ದೆಹಲಿಯಿಂದ ಪಾಟ್ನಾಗೆ ತೆರಳುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದರೂ, ಪೈಲಟ್‌ನ ಚಾಣಾಕ್ಷತನದಿಂದ ಮತ್ತೆ ಟೇಕಾಫ್ ಆಗಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಘಟನೆಯಿಂದ 173 ಪ್ರಯಾಣಿಕರ ಜೀವ ಉಳಿದಂತಾಗಿದೆ.

ಮಂಗಳವಾರ (ಜುಲೈ 14) ರಾತ್ರಿ, ದೆಹಲಿಯಿಂದ ಪಾಟ್ನಾದ ಜಯ ಪ್ರಕಾಶ್ ನಾರಾಯಣ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ 6E2482 ಲ್ಯಾಂಡಿಂಗ್ ಸಮಯದಲ್ಲಿ ಗೊತ್ತುಪಡಿಸಿದ ಟಚ್‌ಡೌನ್ ಪಾಯಿಂಟ್‌ಗಿಂತ ಮುಂದೆ ಇಳಿಯಿತು. ರನ್‌ವೇ ಉದ್ದ ಸಾಕಷ್ಟಿಲ್ಲದಿರುವುದನ್ನು ಅರಿತ ಪೈಲಟ್, ತಕ್ಷಣವೇ ವಿಮಾನವನ್ನು ಮತ್ತೆ ಗಗನಕ್ಕೆ ಚಿಮ್ಮಿಸಿದರು. ಮೂರು ಸುತ್ತು ವಿಮಾನ ನಿಲ್ದಾಣದ ಮೇಲೆ ಹಾರಾಟ ನಡೆಸಿದ ಬಳಿಕ, ರಾತ್ರಿ 9 ಗಂಟೆಗೆ ವಿಮಾನವು ಸುರಕ್ಷಿತವಾಗಿ ಲ್ಯಾಂಡ್ ಆಯಿತು.

ಪಾಟ್ನಾ ವಿಮಾನ ನಿಲ್ದಾಣದ ರನ್‌ವೇ ತುಲನಾತ್ಮಕವಾಗಿ ಚಿಕ್ಕದಾಗಿದ್ದು, ಲ್ಯಾಂಡಿಂಗ್ ಸಮಯದಲ್ಲಿ ಸವಾಲುಗಳು ಸಾಮಾನ್ಯವಾಗಿರುತ್ತವೆ. ಆದರೆ, ಪೈಲಟ್‌ನ ತ್ವರಿತ ತೀರ್ಮಾನದಿಂದ ದೊಡ್ಡ ದುರಂತವೊಂದು ತಪ್ಪಿತು. ವಿಮಾನದಲ್ಲಿದ್ದ ಎಲ್ಲ 173 ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ.

Exit mobile version