ಇಂದು ಕೇಂದ್ರ ಬಜೆಟ್: ಬಡವರು, ಮಧ್ಯಮ ವರ್ಗಕ್ಕೆ ಬಂಪರ್ ಕೊಡುಗೆ ಸಾಧ್ಯತೆ

Untitled design 2026 02 01T070214.144

ನವದೆಹಲಿ: ದೇಶದ ಆರ್ಥಿಕ ಭವಿಷ್ಯಕ್ಕೆ ದಿಕ್ಕು ನೀಡುವ 2026–27ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಇಂದು (ಫೆಬ್ರವರಿ 1) ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಇದು ಅವರ ಒಂಬತ್ತನೇ ಬಜೆಟ್ ಆಗಲಿದೆ. ಜಾಗತಿಕ ರಾಜಕೀಯ ಉದ್ವಿಗ್ನತೆ, ವ್ಯಾಪಾರ ಘರ್ಷಣೆಗಳು ಮತ್ತು ಅಮೆರಿಕದ ಹೊಸ ಸುಂಕ ನೀತಿಗಳ ನಡುವೆ ಈ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ “GST 2.0” ಎಂಬ ಹೆಸರಿನಲ್ಲಿ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಸುಧಾರಣೆಗಳ ಜೊತೆಗೆ ಆದಾಯ ತೆರಿಗೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಿತ್ತು. ಭಾರತೀಯ ರಿಸರ್ವ್ ಬ್ಯಾಂಕ್ ಕೈಗೊಂಡ ಬಡ್ಡಿದರ ಕಡಿತ ಕ್ರಮಗಳೊಂದಿಗೆ, ಈ ನಿರ್ಧಾರಗಳು ಜಾಗತಿಕ ಒತ್ತಡಗಳ ನಡುವೆಯೂ ಭಾರತೀಯ ಆರ್ಥಿಕತೆಯನ್ನು ಹಾದಿಯಲ್ಲಿ ಉಳಿಸಿಕೊಳ್ಳಲು ನೆರವಾಗಿದ್ದವು. ಆದರೆ ಈಗ ಬಳಕೆ ಹೆಚ್ಚಿಸುವುದು ಮತ್ತು ಉದ್ಯೋಗ ಸೃಷ್ಟಿಯನ್ನು ವೇಗಗೊಳಿಸುವುದು ಸರ್ಕಾರದ ಮುಂದಿರುವ ದೊಡ್ಡ ಸವಾಲಾಗಿದೆ.

ಚುನಾವಣೆ ರಾಜ್ಯಗಳ ಮೇಲೆ ವಿಶೇಷ ಗಮನ?

ಈ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಹಾಗೂ ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ಆರ್ಥಿಕ ಪ್ಯಾಕೇಜ್‌ಗಳು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ರಾಜ್ಯಗಳಿಗೆ ಮೂಲಸೌಕರ್ಯ, ಸಾಮಾಜಿಕ ಕಲ್ಯಾಣ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಮತದಾರರನ್ನು ಆಕರ್ಷಿಸುವ ತಂತ್ರ ಸರ್ಕಾರ ಅನುಸರಿಸಬಹುದು ಎಂಬ ಅಂದಾಜಿಸಲಾಗಿದೆ.

ಬಂಡವಾಳ ವೆಚ್ಚಕ್ಕೆ ಆದ್ಯತೆ

ಕೇಂದ್ರ ಸರ್ಕಾರ ಬಂಡವಾಳ ವೆಚ್ಚದ ಮೇಲಿನ ತನ್ನ ಒತ್ತಡವನ್ನು ಈ ಬಜೆಟ್‌ನಲ್ಲೂ ಮುಂದುವರಿಸುವ ನಿರೀಕ್ಷೆ ಇದೆ. ರೈಲ್ವೆ, ನವೀಕರಿಸಬಹುದಾದ ಇಂಧನ, ವಿದ್ಯುತ್ ಪ್ರಸರಣ, ರಕ್ಷಣಾ ಕ್ಷೇತ್ರ ಹಾಗೂ ನಗರ ಸಾರಿಗೆ ವ್ಯವಸ್ಥೆಗಳಿಗೆ ಹೆಚ್ಚಿನ ಹೂಡಿಕೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಬಿಐ ಸಂಶೋಧನಾ ಸಂಸ್ಥೆಯ ಅಂದಾಜಿನಂತೆ, 2027ನೇ ಹಣಕಾಸು ವರ್ಷದಲ್ಲಿ ಸರ್ಕಾರದ ಬಂಡವಾಳ ವೆಚ್ಚ ರೂ.12 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಇದು ವಾರ್ಷಿಕವಾಗಿ ಸುಮಾರು ಶೇಕಡಾ 10ರಷ್ಟು ಬೆಳವಣಿಗೆಯ ಸೂಚಕವಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಹೊಸ ಉತ್ತೇಜನ ನೀಡಲಿದೆ.

ತೆರಿಗೆ ನೀತಿ: ಮಧ್ಯಮ ವರ್ಗಕ್ಕೆ ನಿರೀಕ್ಷೆ

ಈ ಬಜೆಟ್‌ನಲ್ಲಿ ದೊಡ್ಡ ಮಟ್ಟದ ತೆರಿಗೆ ಕಡಿತಗಳು ಸಂಭವಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೆ ಮಧ್ಯಮ ವರ್ಗದ ಮೇಲೆ ಇರುವ ತೆರಿಗೆ ಭಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವ ಉದ್ದೇಶದಿಂದ ವೈಯಕ್ತಿಕ ಆದಾಯ ತೆರಿಗೆಯಲ್ಲಿ ಕೆಲವು ಬದಲಾವಣೆಗಳು ಆಗಬಹುದು ಎಂಬ ನಿರೀಕ್ಷೆ ಇದೆ. ಕಾರ್ಪೊರೇಟ್ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಂಎಸ್‌ಎಂಇ ಮತ್ತು ಉದ್ಯೋಗ ಸೃಷ್ಟಿ

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಾದ ಎಂಎಸ್‌ಎಂಇ ವಲಯದ ಮೇಲೂ ಬಜೆಟ್‌ನಲ್ಲಿ ವಿಶೇಷ ಗಮನ ಹರಿಸಲಾಗುವ ನಿರೀಕ್ಷೆ ಇದೆ. ಕಾರ್ಮಿಕ-ತೀವ್ರ ಉತ್ಪಾದನೆ, ಕೌಶಲ್ಯಾಭಿವೃದ್ಧಿ ಹಾಗೂ ಅಪ್ರೆಂಟಿಸ್‌ಶಿಪ್ ಯೋಜನೆಗಳಿಗೆ ಪ್ರೋತ್ಸಾಹಕ ಪ್ಯಾಕೇಜ್‌ಗಳು ಘೋಷಣೆಯಾಗಬಹುದು. ಉತ್ಪಾದನೆ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಗಳಲ್ಲಿ ಪರಿಷ್ಕರಣೆ ಸಾಧ್ಯತೆಗಳನ್ನೂ ತಜ್ಞರು ಸೂಚಿಸಿದ್ದಾರೆ.

ಇಂಧನ ಭದ್ರತೆ 

ಇಂಧನ ಪರಿವರ್ತನೆಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್, ಬ್ಯಾಟರಿ ಸಂಗ್ರಹಣೆ ಮತ್ತು ವಿದ್ಯುತ್ ವಾಹನಗಳಿಗೆ ಬೆಂಬಲ ಘೋಷಿಸಬಹುದು. ಜೊತೆಗೆ, ಜಾಗತಿಕ ಅನಿಶ್ಚಿತತೆಯ ನಡುವೆಯೂ ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ತೈಲ–ಅನಿಲ ಮೂಲಸೌಕರ್ಯ ಹಾಗೂ ಕಾರ್ಯತಂತ್ರದ ಸಂಗ್ರಹಗಳಿಗೆ ಹೆಚ್ಚಿನ ಹಂಚಿಕೆ ಮಾಡುವ ಸಾಧ್ಯತೆ ಇದೆ.

Exit mobile version