ನವದೆಹಲಿ: ಭಾರತೀಯ ಸಂಸತ್ನಲ್ಲಿ 3 ದಿನಗಳ ವಿಶೇಷ ಅಧಿವೇಶನ ಶುರುವಾಗಿದೆ. ಇಂದು ಸಂಸತ್ನಲ್ಲಿ ಎರಡು ಐತಿಹಾಸಿಕ ಮಸೂದೆಗಳು ಮಂಡನೆಯಾಗಿವೆ. ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33% ಸೀಟು ಮೀಸಲಿಡುವ ‘ನಾರಿ ಶಕ್ತಿ ವಂದನ್ ಅಧಿನಿಯಮ’ವನ್ನು ಅನುಷ್ಠಾನಗೊಳಿಸುವ ಮಸೂದೆ ಮತ್ತು ಲೋಕಸಭೆಯ ಸದಸ್ಯರ ಸಂಖ್ಯೆಯನ್ನು ಪ್ರಸ್ತುತ 543ರಿಂದ 850ಕ್ಕೆ ಹೆಚ್ಚಿಸುವ ಸಾಂವಿಧಾನಿಕ ತಿದ್ದುಪಡಿ ಮಸೂದೆಗಳು ಇವಾಗಿವೆ.
ಕೇಂದ್ರ ಸರ್ಕಾರ ಈ ಎರಡು ಮಸೂದೆಗಳನ್ನು ಮಂಡಿಸಿದ್ದು, ಇದು ಮಹಿಳಾ ಸಬಲೀಕರಣಕ್ಕೆ ದೊಡ್ಡ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. “ತಾಯಂದಿರು ಮತ್ತು ಸಹೋದರಿಯರ ಮೇಲಿನ ಗೌರವವೇ ದೇಶದ ಮೇಲಿನ ಗೌರವ” ಎಂದು ಹೇಳಿದ ಅವರು, ಎಲ್ಲ ಪಕ್ಷಗಳು ತಿದ್ದುಪಡಿಗಳನ್ನು ಅಂಗೀಕರಿಸಲು ಒಂದಾಗಬೇಕು ಎಂದು ಮನವಿ ಮಾಡಿದ್ದಾರೆ.
ಆದರೆ ವಿಪಕ್ಷಗಳು ಈ ಮಸೂದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ರಾಹುಲ್ ಗಾಂಧಿ ಅವರು ಇದನ್ನು “ದೇಶ ವಿರೋಧಿ ನಡೆ” ಎಂದು ಕಿಡಿಕಾರಿದ್ದಾರೆ. ಕ್ಷೇತ್ರಗಳ ಮರುವಿಂಗಡಣೆ ಯಾವ ಆಧಾರದ ಮೇಲೆ ನಡೆಯುತ್ತದೆ ಎಂದು ಪ್ರಶ್ನಿಸಿದ ಅವರು, ಇದು ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನಲ್ಲಿ ಡಿಎಂಕೆ ಸದಸ್ಯರು ಮಸೂದೆಯ ಪ್ರತಿಗಳನ್ನು ಸುಟ್ಟು ಆಕ್ರೋಶ ಹೊರಹಾಕಿದ್ದಾರೆ. ಡಿಎಂಕೆ ಸಂಸದರು ಕಪ್ಪು ಪಟ್ಟಿ ಧರಿಸಿ ಸಂಸತ್ಗೆ ಬಂದಿದ್ದು, “ಇದು ಒಕ್ಕೂಟ ರಚನೆಯ ಮೇಲಿನ ದೊಡ್ಡ ದಾಳಿ” ಎಂದು ಕನಿಮೋಳಿ ಆರೋಪಿಸಿದ್ದಾರೆ. ವಿಪಕ್ಷ ಸದಸ್ಯರು ಕಪ್ಪು ಪಟ್ಟಿ ಧರಿಸಿ ಕಲಾಪಕ್ಕೆ ಬಂದಿರುವುದರಿಂದ ಇಂದು ಭಾರೀ ಗದ್ದಲ ಸಾಧ್ಯತೆ ಇದೆ ಎಂಬುದು ತಿಳಿದುಬಂದಿದೆ.
ಲೋಕಸಭೆಯಲ್ಲಿ ಮಸೂದೆಗಳ ಮೇಲೆ ಸಂಜೆ 4 ಗಂಟೆಗೆ ಮತದಾನ ನಡೆಯಲಿದೆ. ಸಾಂವಿಧಾನಿಕ ತಿದ್ದುಪಡಿ ಆಗಿರುವುದರಿಂದ ಎರಡರಲ್ಲಿ ಮೂರರಷ್ಟು ಬಹುಮತ ಅಗತ್ಯವಿದೆ. ಬಿಜೆಪಿ ನೇತೃತ್ವದ ಎನ್ಡಿಎಗೆ ಈ ಬಹುಮತ ಇಲ್ಲದ ಕಾರಣ ವಿಪಕ್ಷಗಳ ಬೆಂಬಲ ಅತ್ಯಗತ್ಯ. ವಿಪಕ್ಷದ 90 ಸದಸ್ಯರು ಗೈರಾದರೆ ಸರ್ಕಾರಕ್ಕೆ ಅನುಕೂಲವಾಗಬಹುದು ಎಂಬ ಚರ್ಚೆಯೂ ನಡೆಯುತ್ತಿದೆ.
ಪ್ರಧಾನಿ ಮೋದಿ ಲೋಕಸಭೆ ಮತ್ತು ರಾಜ್ಯಸಭೆ ಸದಸ್ಯರಿಗೆ ಪತ್ರ ಬರೆದು ಬೆಂಬಲ ಕೋರಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಈ ಮಸೂದೆಗಳು 2029ರ ಚುನಾವಣೆಗೆ ಮಹಿಳಾ ಮೀಸಲಾತಿಯನ್ನು ಅನುಷ್ಠಾನಗೊಳಿಸುವ ಗುರಿ ಹೊಂದಿವೆ. ಆದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ನಿಯಂತ್ರಣದಿಂದಾಗಿ ಪ್ರಾತಿನಿಧ್ಯ ಕಡಿಮೆಯಾಗುವ ಆತಂಕ ವ್ಯಕ್ತವಾಗಿದೆ.
