ನವದೆಹಲಿ, ಜುಲೈ 03: ಭಾರತ ಸರ್ಕಾರವು ಪ್ರಮುಖ ಸಾಮಾಜಿಕ ಮಾಧ್ಯಮ ಮತ್ತು ಮೆಸೇಜಿಂಗ್ ವೇದಿಕೆಗಳ ವಿರುದ್ಧ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಿದೆ. ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಬಳಕೆದಾರರು ಪರಸ್ಪರ ಸಂಪರ್ಕಿಸಲು ಅನುವು ಮಾಡಿಕೊಡುವ ‘ಯೂಸರ್ ನೇಮ್’ (Username) ವೈಶಿಷ್ಟ್ಯದ ಸುತ್ತಲಿನ ಸುರಕ್ಷತಾ ಕಾಳಜಿಗಳ ಕುರಿತು ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮತ್ತು ಸಿಗ್ನಲ್ (Signal) ಸಂಸ್ಥೆಗಳಿಗೆ ಅಧಿಕೃತ ನೋಟಿಸ್ ಜಾರಿ ಮಾಡಿದೆ.
ಬುಧವಾರ ವಾಟ್ಸಾಪ್ ಸಂಸ್ಥೆಗೆ ನೋಟಿಸ್ ನೀಡಿದ್ದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು, ಈಗ ಇತರೆ ಎರಡು ಜನಪ್ರಿಯ ಆ್ಯಪ್‌ಗಳ ಕಡೆಗೂ ತನ್ನ ದೃಷ್ಟಿ ಹರಿಸಿದೆ. ‘ಯೂಸರ್ ನೇಮ್’ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಉತ್ತಮವಾದರೂ, ಸೈಬರ್ ವಂಚನೆ ಮತ್ತು ಗುರುತಿನ ಕಳ್ಳತನಕ್ಕೆ ಇದು ಕಾರಣವಾಗಬಹುದು ಎಂಬುದು ಸರ್ಕಾರದ ಆತಂಕವಾಗಿದೆ.
ಕೇಂದ್ರದ ಪ್ರಶ್ನೆಗಳೇನು?:
ತಮ್ಮ ಅಧಿಕೃತ ಹೆಸರುಗಳನ್ನು ಹೋಲುವ ನಕಲಿ ಯೂಸರ್ ನೇಮ್‌ಗಳನ್ನು ಸೃಷ್ಟಿಸಿ, ಸಾರ್ವಜನಿಕ ಅಧಿಕಾರಿಗಳು, ಪ್ರಸಿದ್ಧ ವ್ಯಕ್ತಿಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ವಂಚನೆ ನಡೆಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಈ ಆ್ಯಪ್‌ಗಳು ಅಂತಹ ದುರುಪಯೋಗಗಳನ್ನು ತಡೆಯಲು ಅನುಸರಿಸುತ್ತಿರುವ ಭದ್ರತಾ ಕ್ರಮಗಳ ಬಗ್ಗೆ ಸಚಿವಾಲಯವು ವಿವರಣೆ ಕೋರಿದೆ. ಮೊಬೈಲ್ ಸಂಖ್ಯೆಯಿಲ್ಲದೆ ಸಂಪರ್ಕ ಸಾಧಿಸಲು ಅವಕಾಶ ನೀಡುವ ಈ ವ್ಯವಸ್ಥೆಯಲ್ಲಿ, ನಕಲಿ ಖಾತೆಗಳನ್ನು ಪತ್ತೆಹಚ್ಚುವುದು ಮತ್ತು ದುರುಪಯೋಗಪಡಿಸಿಕೊಳ್ಳುವುದು ಹೇಗೆ ಸಾಧ್ಯ ಎಂಬುದರ ಕುರಿತು ಆ್ಯಪ್‌ಗಳು ಸ್ಪಷ್ಟತೆ ನೀಡಬೇಕಾಗಿದೆ. ಅಲ್ಲದೆ, ಈ ವೈಶಿಷ್ಟ್ಯವು ಭಾರತೀಯ ಬಳಕೆದಾರರಿಗೆ ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ ಎಂಬುದನ್ನು ಪ್ರತಿಪಾದಿಸುವಂತೆ ಸರ್ಕಾರ ಸೂಚಿಸಿದೆ.
ವಾಟ್ಸಾಪ್‌ನ ವಿವರಣೆ
ಈ ವಿಷಯವಾಗಿ ವಾಟ್ಸಾಪ್‌ಗೆ 3 ದಿನಗಳ ಒಳಗೆ ವಿವರಣೆ ನೀಡುವಂತೆ ಮತ್ತು ಸಮಾಲೋಚನೆ ಮುಗಿಯುವವರೆಗೆ ಭಾರತದಲ್ಲಿ ಈ ವೈಶಿಷ್ಟ್ಯವನ್ನು ಬಿಡುಗಡೆ ಮಾಡದಂತೆ ಸರ್ಕಾರ ಸೂಚಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಾಟ್ಸಾಪ್, ತಾನು ಈಗಾಗಲೇ ಹಲವು ಸುರಕ್ಷತಾ ಪದರಗಳನ್ನು ಅಳವಡಿಸಿಕೊಂಡಿರುವುದಾಗಿ ತಿಳಿಸಿದೆ. ನಿಖರವಾದ ಯೂಸರ್ ನೇಮ್ ತಿಳಿದಿರಬೇಕಾದ ನಿಯಮ, ಊಹಿಸುವ ಪ್ರಯತ್ನಗಳಿಗೆ (Brute-force attacks) ನೀಡಲಾಗುವ ಬ್ಲಾಕ್, ಮತ್ತು ಅಪರಿಚಿತ ಸಂದೇಶವೊಂದು ಯಾವ ದೇಶದಿಂದ ಬಂದಿದೆ ಎಂಬ ಮಾಹಿತಿಯಂತಹ (Proxy info) ಕ್ರಮಗಳು ತನ್ನಲ್ಲಿವೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ. ಟೆಲಿಗ್ರಾಮ್ ಮತ್ತು ಸಿಗ್ನಲ್‌ಗೆ ನೀಡಲಾದ ನೋಟಿಸ್‌ನಲ್ಲಿ, ಈ ಆ್ಯಪ್‌ಗಳು ಬಳಸುವ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಮತ್ತು ಅನಾಮಧೇಯತೆಯ ತಂತ್ರಜ್ಞಾನಗಳು ವಂಚನೆಯನ್ನು ಹೇಗೆ ತಡೆಯುತ್ತವೆ ಅಥವಾ ತಡೆಯಲು ವಿಫಲವಾಗುತ್ತವೆ ಎಂಬುದರ ಕುರಿತು ವಿವರವಾದ ಮಾಹಿತಿಯನ್ನು ಕೋರಲಾಗಿದೆ.
ಟೆಲಿಗ್ರಾಮ್‌ಗೆ ತಲೆನೋವು ಹೆಚ್ಚಿದೆ:
ಟೆಲಿಗ್ರಾಮ್ ಆ್ಯಪ್ ಈಗಾಗಲೇ ಇತ್ತೀಚಿನ ದಿನಗಳಲ್ಲಿ ಸರ್ಕಾರದ ತೀವ್ರ ನಿಗಾದಲ್ಲಿದೆ. ಕಳೆದ ತಿಂಗಳು ನಡೆದ NEET (ನೀಟ್) ಪರೀಕ್ಷೆಯ ನಕಲಿ ಪ್ರಶ್ನೆಪತ್ರಿಕೆಗಳ ಸೋರಿಕೆ ಮತ್ತು ಪ್ರಸರಣಕ್ಕೆ ಈ ವೇದಿಕೆಯನ್ನು ವ್ಯಾಪಕವಾಗಿ ಬಳಸಲಾಗಿದೆ ಎಂಬ ಆರೋಪದ ಮೇಲೆ ಟೆಲಿಗ್ರಾಮ್ ಮೇಲೆ ಒಂದು ವಾರದ ಕಾಲ ನಿಷೇಧ ಹೇರಲಾಗಿತ್ತು. ಜೂನ್ 22 ರಂದು ನಿಷೇಧ ಕೊನೆಗೊಂಡು ಸೇವೆಗಳು ಮರಳಿದ್ದರೂ, ಈಗ ಹೊಸದಾಗಿ ಯೂಸರ್ ನೇಮ್ ವಿವಾದವು ಟೆಲಿಗ್ರಾಮ್ ಮತ್ತು ಸಿಗ್ನಲ್‌ಗೆ ಹೊಸ ಸವಾಲನ್ನು ಒಡ್ಡಿದೆ. ಈ ಹಿಂದೆಯೂ ಸರ್ಕಾರಿ ಸೂಚನೆಗಳನ್ನು ಪಾಲಿಸುವಲ್ಲಿ ಟೆಲಿಗ್ರಾಮ್ ಸಾಕಷ್ಟು ಹಿಂದುಳಿದಿದ್ದು, ಈಗಿನ ನೋಟಿಸ್ ಅದಕ್ಕೆ ಮತ್ತೊಂದು ಎಚ್ಚರಿಕೆಯ ಗಂಟೆಯಾಗಿದೆ.
