ಅಮೆರಿಕದ ಆಮದು ವಸ್ತುಗಳ ಮೇಲೆ ಶೇ.50ರಷ್ಟು ಸುಂಕ ಹೇರಿರುವ ಡೊನಾಲ್ಡ್ ಟ್ರಂಪ್ ಸರ್ಕಾರಕ್ಕೆ ಭಾರತ ಸದ್ದಿಲ್ಲದೆ ತಿರುಗೇಟು ನೀಡಿದೆ. ಅಮೆರಿಕದಿಂದ ಆಮದಾಗುವ ದ್ವಿದಳ ಧಾನ್ಯಗಳು (ಹಳದಿ ಬಟಾಣಿ) ಮೇಲೆ ಶೇ.30ರಷ್ಟು ಸುಂಕ ವಿಧಿಸುವ ಮೂಲಕ ಮೋದಿ ಸರ್ಕಾರ ಅಮೆರಿಕಕ್ಕೆ ಭಾರೀ ಶಾಕ್ ನೀಡಿದೆ.
ನವೆಂಬರ್ 2025ರಿಂದಲೇ ಈ ಸುಂಕ ಜಾರಿಗೆ ಬಂದಿದ್ದು, ಮಾರ್ಚ್ 2026ರವರೆಗೆ ಮುಂದುವರಿಯಲಿದೆ. ಇದಕ್ಕೂ ಮೊದಲು ಅಮೆರಿಕದಿಂದ ಬರುವ ಹಳದಿ ಬಟಾಣಿಗೆ ಸಂಪೂರ್ಣ ಸುಂಕ ರಹಿತ ಆಮದು ಅವಕಾಶವಿತ್ತು. ಆದರೆ, ಸ್ಥಳೀಯ ಭಾರತೀಯ ರೈತರ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಅಮೆರಿಕ ಸೆನೆಟರ್‌ಗಳೇ ಟ್ರಂಪ್ ಬಳಿ ಮೊರೆ ಈ ಸುಂಕದಿಂದ ಅಮೆರಿಕದ ಉತ್ತರ ಡಕೋಟಾ ಮತ್ತು ಮೊಂಟಾನಾ ರಾಜ್ಯಗಳ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ಈ ಎರಡು ರಾಜ್ಯಗಳು ಅಮೆರಿಕದ ದ್ವಿದಳ ಧಾನ್ಯಗಳ ಪ್ರಮುಖ ಉತ್ಪಾದಕ ಕೇಂದ್ರಗಳು. ಭಾರತವೇ ಜಾಗತಿಕ ಮಟ್ಟದಲ್ಲಿ ದ್ವಿದಳ ಧಾನ್ಯಗಳ ಅತಿದೊಡ್ಡ ಗ್ರಾಹಕ (ಶೇ.27ರಷ್ಟು).
ಈ ಹಿನ್ನೆಲೆಯಲ್ಲಿ ಉತ್ತರ ಡಕೋಟಾ ಮತ್ತು ಮೊಂಟಾನಾ ರಾಜ್ಯಗಳ ಸೆನೆಟರ್‌ಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪತ್ರ ಬರೆದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಕ್ಷಣ ಮಾತುಕತೆ ನಡೆಸಿ ಈ ಸುಂಕ ತೆರವುಗೊಳಿಸುವಂತೆ ವಿನಂತಿಸಿದ್ದಾರೆ.
ಟ್ರಂಪ್ ಭಾರತಕ್ಕೆ ಹೇರಿದ್ದ ಸುಂಕಗಳು:
- ಟ್ರಂಪ್ ಅಧಿಕಾರಕ್ಕೆ ಬಂದ ತಕ್ಷಣ ಭಾರತೀಯ ವಸ್ತುಗಳ ಮೇಲೆ ಶೇ.25 ಸುಂಕ ಹೇರಿದ್ದರು.
- ಬಳಿಕ ರಷ್ಯಾದಿಂದ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ಪ್ರತೀಕಾರವಾಗಿ ಹೆಚ್ಚುವರಿ ಶೇ.25 ಸುಂಕ ಹೇರಿ ಒಟ್ಟು ಶೇ.50 ಮಾಡಿದ್ದರು.
ಈಗ ಭಾರತದ ಈ ತಿರುಗೇಟು ನಡೆಸಿರುವ ಕ್ರಮಕ್ಕೆ ಅಮೆರಿಕದ ರಾಜಕೀಯ ವಲಯದಲ್ಲೇ ಭಾರೀ ಚರ್ಚೆ ನಡೆಯುತ್ತಿದೆ. ಟ್ರಂಪ್ ಆಡಳಿತ ಈಗ ಮೋದಿ ಸರ್ಕಾರದೊಂದಿಗೆ ಮಾತುಕತೆಗೆ ಕೂರಲು ಒತ್ತಡಕ್ಕೊಳಗಾಗಿದೆ.
