ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಚಿನ್ನ, ಬೆಳ್ಳಿ ಆಮದು ಸುಂಕ ಶೇ. 15ಕ್ಕೆ ಏರಿಸಿದ ಕೇಂದ್ರ ಸರ್ಕಾರ

Untitled design 2026 05 13T084526.716

ನವದೆಹಲಿ: ಬಂಗಾರ ಪ್ರಿಯರಿಗೆ ಕಹಿ ಸುದ್ದಿಯೊಂದು ಬಂದಿದೆ. ಚಿನ್ನ (Gold) ಮತ್ತು ಬೆಳ್ಳಿಯ (Silver) ಬೆಲೆ ಮತ್ತಷ್ಟು ಏರುವ ಮುನ್ಸೂಚನೆಗಳ ನಡುವೆ, ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು (Import Tariff) ಶೇ. 6 ರಿಂದ ಶೇ. 15ಕ್ಕೆ ಹೆಚ್ಚಿಸಿ ಹೊಸ ನಿರ್ಧಾರ ಕೈಗೊಂಡಿದೆ. ಈ ಆದೇಶ ಬುಧವಾರವೇ ಹೊರಡಿಸಲಾಗಿದೆ.

ಈ ನಿರ್ಧಾರವು ದೇಶದ ವಿದೇಶಿ ವಿನಿಮಯ ಮೀಸಲು ನಿಧಿಯನ್ನು ರಕ್ಷಿಸುವುದು ಮತ್ತು ಆಮದು ಅವಲಂಬನೆ ಕಡಿಮೆ ಮಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಲಾಗಿದೆ.

ಈ ಹೊಸ ನಿಯಮದ ಪ್ರಕಾರ, ಚಿನ್ನ ಮತ್ತು ಬೆಳ್ಳಿಯ ಮೇಲೆ ಶೇ.10 ಮೂಲ ಕಸ್ಟಮ್ಸ್ ಸುಂಕ (Basic Customs Duty) ಹಾಗೂ ಶೇ.5 ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ (AIDC) ವಿಧಿಸಲಾಗುತ್ತದೆ. ಇವುಗಳನ್ನು ಸೇರಿಸಿದಾಗ ಒಟ್ಟು ಆಮದು ತೆರಿಗೆ ಶೇ.15ಕ್ಕೆ ತಲುಪುತ್ತದೆ. ಕಳೆದ ವರ್ಷ ಸರ್ಕಾರವು ಕೆಲವು ಹಂತದಲ್ಲಿ ಈ ತೆರಿಗೆಯನ್ನು ಕಡಿತಗೊಳಿಸಿದ್ದರೂ, ಈಗಿನ ನಿರ್ಧಾರದಿಂದ ಮತ್ತೆ ತೆರಿಗೆ ಭಾರ ಹೆಚ್ಚಾಗಿದೆ.

ಆಮದು ಅವಲಂಬನೆ ಕಡಿಮೆ ಮಾಡಲು ಸರ್ಕಾರದ ಕ್ರಮ

ಭಾರತವು ತನ್ನ ಚಿನ್ನದ ಬೇಡಿಕೆಗೆ ಬಹುಪಾಲು ಆಮದು ಮೇಲೆ ಅವಲಂಬಿತವಾಗಿದೆ. ಈ ಹಿನ್ನೆಲೆ ವಿದೇಶಿ ವಿನಿಮಯದ ಮೇಲೆ ಒತ್ತಡ ಹೆಚ್ಚಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ಕ್ರಮ ಕೈಗೊಂಡಿದೆ. ಚಿನ್ನದ ಆಮದು ಕಡಿಮೆಯಾಗುವುದರಿಂದ ದೇಶದ ವ್ಯಾಪಾರ ಕೊರತೆ (Trade Deficit) ನಿಯಂತ್ರಣಕ್ಕೆ ಬರಬಹುದು ಹಾಗೂ ರೂಪಾಯಿಯ ಮೌಲ್ಯ ಸ್ಥಿರಗೊಳ್ಳಲು ಸಹಾಯವಾಗಬಹುದು ಎಂಬುದು ಸರ್ಕಾರದ ನಿರೀಕ್ಷೆಯಾಗಿದೆ.

ಇತ್ತೀಚೆಗೆ ಪ್ರಧಾನ ಮಂತ್ರಿಗಳು ಜನರಿಗೆ ಕನಿಷ್ಠ ಒಂದು ವರ್ಷ ಚಿನ್ನದ ಖರೀದಿಯನ್ನು ನಿಯಂತ್ರಿಸಲು ಮನವಿ ಮಾಡಿದ ವರದಿಗಳ ನಡುವೆ ಈ ನಿರ್ಧಾರ ಬಂದಿದೆ. ಇದರಿಂದ ಆರ್ಥಿಕ ಸ್ಥಿರತೆ ಸಾಧಿಸಲು ಸರ್ಕಾರವು ಹಲವು ಹಂತಗಳಲ್ಲಿ ನೀತಿಗಳನ್ನು ರೂಪಿಸುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.

ಮಾರುಕಟ್ಟೆ ಮೇಲೆ ತಕ್ಷಣ ಪರಿಣಾಮ

ಚಿನ್ನದ ಬೆಲೆ ಈಗಾಗಲೇ ಗಗನಕ್ಕೇರಿರುವ ಹಿನ್ನೆಲೆ ಈ ತೆರಿಗೆ ಹೆಚ್ಚಳವು ಇನ್ನಷ್ಟು ಬೆಲೆ ಏರಿಕೆಗೆ ಕಾರಣವಾಗಬಹುದು ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಮದು ಸುಂಕ ಹೆಚ್ಚಾದರೆ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ನೇರವಾಗಿ ಏರಿಕೆ ಕಾಣುತ್ತದೆ. ಇದರ ಪರಿಣಾಮವಾಗಿ ಸಾಮಾನ್ಯ ಗ್ರಾಹಕರ ಖರೀದಿ ಸಾಮರ್ಥ್ಯಕ್ಕೆ ಹೊಡೆತ ಬೀಳಬಹುದು.

ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ಪ್ರಕಾರ, ಬೇಡಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೆ ಮತ್ತೊಂದೆಡೆ ಕೆಲವು ಗ್ರಾಹಕರು ಭದ್ರ ಹೂಡಿಕೆ ಎಂದು ಪರಿಗಣಿಸಿ ಚಿನ್ನದತ್ತ ಆಕರ್ಷಿತರಾಗುತ್ತಿರುವುದೂ ಕಂಡುಬರುತ್ತಿದೆ.

ಅಕ್ರಮ ಚಿನ್ನ ಸಾಗಣೆ ಆತಂಕ

ತೆರಿಗೆ ಹೆಚ್ಚಳದ ಪರಿಣಾಮವಾಗಿ ಚಿನ್ನದ ಕಳ್ಳಸಾಗಣೆ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉದ್ಯಮ ವಲಯದ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇತಿಹಾಸದಲ್ಲಿಯೂ ಆಮದು ತೆರಿಗೆ ಹೆಚ್ಚಾದಾಗ ಅಕ್ರಮ ಮಾರ್ಗಗಳಿಂದ ಚಿನ್ನ ಸಾಗಣೆ ಪ್ರಕರಣಗಳು ಹೆಚ್ಚಾಗಿರುವುದನ್ನು ಗಮನಿಸಿದರೆ ಈ ಆತಂಕ ಅಸಮಂಜಸವಲ್ಲ ಎಂದು ಅವರು ಹೇಳಿದ್ದಾರೆ.

ಹೂಡಿಕೆಯಲ್ಲಿ ಬದಲಾವಣೆ

ಇತ್ತೀಚಿನ ತಿಂಗಳಲ್ಲಿ ಷೇರು ಮಾರುಕಟ್ಟೆಯ ಏರಿಳಿತಗಳಿಂದ ಹೂಡಿಕೆದಾರರು ಚಿನ್ನ ಆಧಾರಿತ ಹೂಡಿಕೆಗಳತ್ತ ತಿರುಗುತ್ತಿದ್ದಾರೆ. ವಿಶೇಷವಾಗಿ Gold ETF ಗಳಲ್ಲಿ ಹೂಡಿಕೆ ಶೇ.186ರಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದರಿಂದ ಚಿನ್ನವು ಇನ್ನೂ ಸುರಕ್ಷಿತ ಹೂಡಿಕೆ ಆಯ್ಕೆಯಾಗಿ ಪರಿಗಣಿಸಲಾಗುತ್ತಿದೆ.

Exit mobile version