ಅಶ್ಲೀಲ ವಿಷಯ ಪ್ರಸಾರ ಮಾಡುತ್ತಿದ್ದ 5 ಒಟಿಟಿ ಪ್ಲಾಟ್‌ಫಾಮ್ಸ್‌ ನಿಷೇಧ

Untitled design 2026 02 25T102844.982

ನವದೆಹಲಿ: ಡಿಜಿಟಲ್ ಲೋಕದಲ್ಲಿ ಹರಡುತ್ತಿರುವ ಅಶ್ಲೀಲತೆ ಮತ್ತು ಅಸಭ್ಯತೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದೆ. ಸಾರ್ವಜನಿಕ ಸಭ್ಯತೆ ಮತ್ತು ನೈತಿಕತೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು (M&B) ಮಂಗಳವಾರ ಐದು ಜನಪ್ರಿಯ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಿದೆ.

ಯಾವೆಲ್ಲಾ ಪ್ಲಾಟ್‌ಫಾರ್ಮ್‌ಗಳ ಮೇಲೆ ನಿಷೇಧ?

ಸರ್ಕಾರದ ಆದೇಶದಂತೆ ಅತಿ ಹೆಚ್ಚು ಅಶ್ಲೀಲ ವಿಷಯಗಳನ್ನು ಹೊಂದಿದ್ದ ಮೂಡ್‌ಎಕ್ಸ್‌ವಿಐಪಿ (MoodXVIP), ಕೋಯಲ್ ಪ್ಲೇಪ್ರೊ (Koyal PlayPro), ಡಿಜಿ ಮೂವಿಪ್ಲೆಕ್ಸ್ (Digi Movieplex), ಫೀಲ್ (Feel), ಮತ್ತು ಜುಗು (Jugu) ಎಂಬ ಐದು ಪ್ಲಾಟ್‌ಫಾರ್ಮ್‌ಗಳನ್ನ ಕೇಂದ್ರ ಸರ್ಕಾರ ನಿಷಿದ್ಧಗೊಳಿಸಲಾಗಿದೆ.

ನಿರ್ಬಂಧಕ್ಕೆ ಕಾರಣವೇನು ?

ಮಾಹಿತಿ ತಂತ್ರಜ್ಞಾನ ನಿಯಮಗಳು-2021ರ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಬಹುತೇಕ ವಿಷಯಗಳು ಯಾವುದೇ ಅರ್ಥಪೂರ್ಣ ಕಥಾಹಂದರ ಅಥವಾ ಸಾಮಾಜಿಕ ಸಂದೇಶವನ್ನು ಹೊಂದಿರಲಿಲ್ಲ. ಬದಲಿಗೆ, ಕೇವಲ ಲೈಂಗಿಕ ದೃಶ್ಯಗಳು, ನಗ್ನತೆ ಮತ್ತು ಅಶ್ಲೀಲ ಸಂಭಾಷಣೆಗಳನ್ನೇ ಪ್ರಧಾನವಾಗಿ ಬಿತ್ತರಿಸುತ್ತಿದ್ದವು. ಇದು ಭಾರತೀಯ ಸಂಸ್ಕೃತಿ ಮತ್ತು ಸಾರ್ವಜನಿಕ ನೈತಿಕತೆಗೆ ಧಕ್ಕೆ ತರುತ್ತಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ-2000ರ ಸೆಕ್ಷನ್ 69A ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸಭ್ಯತೆಯ ದೃಷ್ಟಿಯಿಂದ ಯಾವುದೇ ಆನ್‌ಲೈನ್ ವಿಷಯವನ್ನು ನಿರ್ಬಂಧಿಸುವ ಅಧಿಕಾರವಿದೆ. ಇದಲ್ಲದೆ, ಐಟಿ ಕಾಯ್ದೆಯ ಸೆಕ್ಷನ್ 79(3)(ಬಿ) ಅಡಿಯಲ್ಲಿ ಸಚಿವಾಲಯವು ಮಧ್ಯವರ್ತಿಗಳಿಗೆ (Internet Service Providers) ಈ ಪ್ಲಾಟ್‌ಫಾರ್ಮ್‌ಗಳಿಗೆ ಪ್ರವೇಶವನ್ನು ತಡೆಯಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಕೇಂದ್ರ ಸರ್ಕಾರವು ಈ ಹಿಂದೆಯೂ ಇಂತಹ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಕಳೆದ ವರ್ಷ ಜುಲೈ ತಿಂಗಳಿನಲ್ಲಿಯೂ ಇದೇ ರೀತಿಯ ದೂರುಗಳ ಹಿನ್ನೆಲೆಯಲ್ಲಿ ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ನಿಷೇಧಿಸಲಾಗಿತ್ತು. ಪದೇ ಪದೇ ಎಚ್ಚರಿಕೆ ನೀಡಿದರೂ ನಿಯಮಗಳನ್ನು ಪಾಲಿಸದ ಮತ್ತು ಅಸಭ್ಯ ವಿಷಯಗಳನ್ನು ತೆಗೆದುಹಾಕಲು ವಿಫಲವಾದ ಒಟಿಟಿಗಳ ವಿರುದ್ಧ ಈಗ ಕಾನೂನು ಸಮರ ಸಾರಲಾಗಿದೆ.

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮತ್ತು ಯುವಜನತೆಯ ಮೇಲೆ ಸಾಮಾಜಿಕ ಜಾಲತಾಣಗಳು ಹಾಗೂ ಒಟಿಟಿಗಳ ಪ್ರಭಾವ ಅಪಾರವಾಗಿದೆ. ಕೇವಲ ಹಣಗಳಿಕೆಯ ಉದ್ದೇಶದಿಂದ ಅಶ್ಲೀಲತೆಯನ್ನು ಪ್ರಚೋದಿಸುವ ವೇದಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತವೆ. ಈ ನಿಟ್ಟಿನಲ್ಲಿ ಸರ್ಕಾರದ ಈ ಕ್ರಮವು ಡಿಜಿಟಲ್ ಪತ್ರಿಕೋದ್ಯಮ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ನೈತಿಕತೆಯನ್ನು ತರಲು ಸಹಕಾರಿಯಾಗಲಿದೆ.

Exit mobile version