ಹೈದರಾಬಾದ್‌ನಲ್ಲಿ ದೇಗುಲ ಧ್ವಂಸಗೊಳಿಸಿದ ಕಿಡಿಗೇಡಿಗಳು: ಸ್ಥಳಕ್ಕೆ ಅಸಾದುದ್ದೀನ್ ಓವೈಸಿ ಭೇಟಿ

Untitled design 2026 01 15T133940.813

ಹೈದರಾಬಾದ್: ದರ್ವಾಜಾ ಪ್ರದೇಶದ ಪುರನಪುಲ್‌ನಲ್ಲಿರುವ ದೇವಾಲಯವನ್ನು ಕಿಡಿಕೇಡಿಗಳು ರಾತ್ರೋರಾತ್ರಿ ಧ್ವಂಸಗೊಳಿಸಿರುವುದು ಬೆಳಕಿಗೆ ಬಂದಿದೆ. ದೇವಾಲಯಕ್ಕೆ ನುಗ್ಗಿದ ದುಷ್ಕರ್ಮಿಗಳು ವಿಗ್ರಹ, ಧಾರ್ಮಿಕ ಧ್ವಜವನ್ನು ಹಾನಿಗೊಳಿಸಿದ್ದಾರೆ..

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಂಜಾನೆ ಸ್ಥಳೀಯ ಗ್ರಾಮಸ್ಥರು ಮತ್ತು ಭಕ್ತರು ದೇವಾಲಯದ ಮುಂದೆ ಜಮಾಯಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಕಾಮತಿಪುರ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಹೆಚ್ಚುವರಿ ಪೊಲೀಸ್ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದವು.

ಈ ಘಟನೆಗೆ ಸಂಬಂಧಿಸಿದಂತೆ ದೇವಾಲಯಕ್ಕೆ ಹಾನಿ ಹಾಗೂ ವಾಹನಗಳ ಧ್ವಂಸ ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಪ್ರತಿಭಟನೆ ಮತ್ತು ಗೊಂದಲದ ನಡುವೆಯೇ ನಡೆದ ತಳ್ಳಾಟದಲ್ಲಿ ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಐಎಂಐಎಂ ಅಧ್ಯಕ್ಷ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಇಂದು ಬೆಳಿಗ್ಗೆ ಪುರನಪುಲ್ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಅವರು ಸ್ಥಳೀಯ ನಿವಾಸಿಗಳು, ದೇವಾಲಯದ ಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಜನರು ಶಾಂತವಾಗಿರಬೇಕು ಹಾಗೂ ತನಿಖೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮಾತನಾಡಿದ ಓವೈಸಿ, “ಇಂತಹ ಘಟನೆಗಳು ಸಮಾಜದಲ್ಲಿ ಭಿನ್ನಾಭಿಪ್ರಾಯ ಮತ್ತು ದ್ವೇಷವನ್ನು ಹೆಚ್ಚಿಸುತ್ತವೆ. ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧವಾಗಿ ಕಠಿಣ ಕ್ರಮ ಜರುಗಬೇಕು. ಶಾಂತಿ ಕಾಪಾಡುವುದು ಎಲ್ಲರ ಹೊಣೆ” ಎಂದು ಹೇಳಿದರು.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಹಾಜರಿದ್ದು, ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಹಾನಿಗೊಳಗಾದ ದೇವಾಲಯ ಮತ್ತು ವಿಗ್ರಹಗಳ ಪುನಃಸ್ಥಾಪನೆ ಕಾರ್ಯವನ್ನು ಪೊಲೀಸರ ಮೇಲ್ವಿಚಾರಣೆಯಲ್ಲಿ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಮರುಕಳಿಸದಂತೆ ಪುರನಪುಲ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ.

ಇದರ ನಡುವೆ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಬಿಜೆಪಿ ತೆಲಂಗಾಣ ಘಟಕ ತನ್ನ ಅಧಿಕೃತ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ, “ಹೈದರಾಬಾದ್‌ನ ಪುರನಪುಲ್‌ನಲ್ಲಿ ದೇವರು ಮತ್ತು ಶಿವಾಜಿ ಧ್ವಜವನ್ನು ಅಪವಿತ್ರಗೊಳಿಸಲಾಗಿದೆ. ತೆಲಂಗಾಣದಲ್ಲಿ ಹಿಂದೂ ದೇವಾಲಯಗಳ ಸಂಘಟಿತ ಮತ್ತು ವ್ಯವಸ್ಥಿತ ಅಪವಿತ್ರಗೊಳಿಸುವಿಕೆ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ತನ್ನ ಮತಬ್ಯಾಂಕ್ ರಾಜಕಾರಣಕ್ಕಾಗಿ ಉಗ್ರಗಾಮಿ ಶಕ್ತಿಗಳಿಗೆ ಅವಕಾಶ ನೀಡುತ್ತಿದೆ” ಎಂದು ಆರೋಪಿಸಿದೆ.

ಬಿಜೆಪಿ ತೆಲಂಗಾಣ ಅಧ್ಯಕ್ಷ ಎನ್. ರಾಮಚಂದರ್ ರಾವ್ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಸರ್ಕಾರದ ವಿರುದ್ಧ ಕಠಿಣ ಟೀಕೆ ವ್ಯಕ್ತಪಡಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಪೊಲೀಸರು, “ಘಟನೆಯ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಸ್ಥಳೀಯ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ತಿಳಿಸಿದ್ದಾರೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡದಂತೆ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Exit mobile version