ಪತ್ನಿಯ ತವರು ಮನೆಯ ಆಸ್ತಿ ಪತಿಗೆ ಸಿಗಲ್ಲ!: ಹೈಕೋರ್ಟ್ ಮಹತ್ವದ ತೀರ್ಪು

Untitled design 2026 04 22T191248.089

ವಿಜಯವಾಡ: ವಿವಾಹಿತ ಮಹಿಳೆಯೊಬ್ಬರು ತಮ್ಮ ಪೋಷಕರಿಂದ ಪಡೆದ ಆಸ್ತಿಯ ಮೇಲೆ ಪತಿ ಅಥವಾ ಅತ್ತೆ-ಮಾವಂದಿರಿಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ಆಂಧ್ರಪ್ರದೇಶ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮಹಿಳೆಯು ಮಕ್ಕಳಿಲ್ಲದೆ ಮೃತಪಟ್ಟ ಸಂದರ್ಭದಲ್ಲಿ ಆಕೆಯ ಪೋಷಕರ ಕುಟುಂಬಕ್ಕೆ ಆ ಆಸ್ತಿ ಮರಳುತ್ತದೆ ಎಂಬ ಮಹತ್ವದ ತೀರ್ಪನ್ನು ನ್ಯಾಯಾಲಯ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

ವಿಜಯವಾಡದ ಕುಟುಂಬವೊಂದರಲ್ಲಿ 2002ರಲ್ಲಿ ವೃದ್ಧೆಯೊಬ್ಬರು ತಮ್ಮ ಆಸ್ತಿಯನ್ನು ತಮ್ಮ ಮೊಮ್ಮಗಳ ಹೆಸರಿಗೆ ಬರೆದುಕೊಟ್ಟಿದ್ದರು. ವಿವಾಹಿತಳಾಗಿದ್ದ ಆ ಮೊಮ್ಮಗಳಿಗೆ ಮಕ್ಕಳಿರಲಿಲ್ಲ. 2005ರಲ್ಲಿ ಆಕೆ ನಿಧನರಾದರು. ನಂತರ ಆ ವೃದ್ಧೆ ತಮ್ಮ ಆಸ್ತಿಯನ್ನು ತಮ್ಮ ಮತ್ತೊಬ್ಬ ಮೊಮ್ಮಗಳಿಗೆ ವರ್ಗಾಯಿಸಲು ಮುಂದಾದರು. ಆದರೆ ಮೃತ ಮೊಮ್ಮಗಳ ಪತಿ ಈ ಆಸ್ತಿಗೆ ತಾನೇ ವಾರಸುದಾರ ಎಂದು ಹಕ್ಕು ಮಂಡಿಸಿದರು. ಜಂಟಿ ಕಲೆಕ್ಟರ್ ಮಟ್ಟದಲ್ಲಿ ವಿವಾದ ಪ್ರಾರಂಭವಾಗಿ, ಅಂತಿಮವಾಗಿ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತು.

ಹೈಕೋರ್ಟ್ ಏನು ಹೇಳಿದೆ?

ನ್ಯಾಯಮೂರ್ತಿ ರಾಜಶೇಖರ್ ರಾವ್ ತರ್ಲದಾ ಅವರ ಪೀಠವು ಹಿಂದೂ ಉತ್ತರಾಧಿಕಾರ ಕಾಯ್ದೆ (Hindu Succession Act) ನಿಯಮಗಳನ್ನು ಆಳವಾಗಿ ಅಧ್ಯಯನ ಮಾಡಿ ಈ ತೀರ್ಪು ನೀಡಿದೆ.

  1. ಮೂಲಕ್ಕೆ ಮರಳುವ ತತ್ವ: ಹಿಂದೂ ಮಹಿಳೆಯೊಬ್ಬರು ತಮ್ಮ ತಂದೆ ಅಥವಾ ತಾಯಿಯಿಂದ (ಪೋಷಕರಿಂದ) ಆಸ್ತಿಯನ್ನು ಪಡೆದಿದ್ದು, ಆಕೆಗೆ ಮಕ್ಕಳಿಲ್ಲದಿದ್ದಲ್ಲಿ ಮತ್ತು ಆಕೆ ಮೃತಪಟ್ಟಲ್ಲಿ, ಆ ಆಸ್ತಿಯು ಆಕೆಯ ಪತಿಯ ವಾರಸುದಾರರಿಗೆ ಹೋಗುವುದಿಲ್ಲ. ಬದಲಿಗೆ ಅದು ಆಕೆಯ ತಂದೆಯ ವಾರಸುದಾರರಿಗೆ (ಪೋಷಕರ ಕುಟುಂಬಕ್ಕೆ) ಮರಳುತ್ತದೆ.

  2. ಪತಿ, ಅತ್ತೆ, ಮಾವನಿಗೆ ಹಕ್ಕಿಲ್ಲ: ಮಕ್ಕಳಿಲ್ಲದೆ ಮೃತಪಟ್ಟ ಮಹಿಳೆಯ ಪತಿಯಾಗಲಿ, ಆತನ ಪೋಷಕರಾಗಲಿ ಆ ಆಸ್ತಿಗೆ ಕಾನೂನಾತ್ಮಕ ಹಕ್ಕು ಮಂಡಿಸಲು ಸಾಧ್ಯವಿಲ್ಲ. ಪತಿಯು ತನ್ನ ಪತ್ನಿಯ ತವರು ಆಸ್ತಿಯನ್ನು ‘ಸ್ವಯಂಚಾಲಿತವಾಗಿ’ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

  3. ವೈಯಕ್ತಿಕ ಆಸ್ತಿ ರಕ್ಷಣೆ: ಮಹಿಳೆಯು ತವರಿನಿಂದ ತಂದ ಆಸ್ತಿಯು ಅವಳ ವೈಯಕ್ತಿಕ ಆಸ್ತಿಯಾಗಿದೆ. ಅದು ಅವಳ ಇಚ್ಛೆಯಂತೆ ಅಥವಾ ಹಿಂದೂ ಕಾಯ್ದೆಯ ನಿಯಮಗಳಂತೆ ಮಾತ್ರ ಪಡೆಯಬೇಕು. ಪತಿಯ ಕುಟುಂಬವು ಅದರ ಮೇಲೆ ಸ್ವಾಭಾವಿಕ ಹಕ್ಕು ಪಡೆಯುವಂತಿಲ್ಲ.

ಈ ತೀರ್ಪಿನ ಪ್ರಾಮುಖ್ಯತೆ ಏನು?

ಈ ತೀರ್ಪಿನ ಅನುಕೂಲ ಯಾರಿಗೆ?

ಯಾವುದೇ ವಿವಾಹಿತ ಮಹಿಳೆ ತನ್ನ ತಂದೆ ಅಥವಾ ತಾಯಿಯಿಂದ ಆಸ್ತಿ ಪಡೆದಿದ್ದರೆ, ಆಕೆ ಮಕ್ಕಳಿಲ್ಲದೆ ಮೃತಪಟ್ಟಲ್ಲಿ, ಆಕೆಯ ಪೋಷಕರು ಅಥವಾ ಪೋಷಕರ ವಾರಸುದಾರರು (ಸಹೋದರ, ಸಹೋದರಿ, ಅವರ ಮಕ್ಕಳು) ಈ ಆಸ್ತಿಗೆ ನ್ಯಾಯಬದ್ಧ ವಾರಸುದಾರರಾಗುತ್ತಾರೆ. ಪತಿಯ ಕುಟುಂಬದವರು ಈ ಆಸ್ತಿಯ ಮೇಲೆ ಬೆರಳಿಡುವಂತಿಲ್ಲ.

ಈ ತೀರ್ಪು ಮಹಿಳೆಯು ಪತಿಯಿಂದ ಪ್ರತ್ಯೇಕವಾಗಿ ಅಥವಾ ತನ್ನ ಗಳಿಕೆಯಿಂದ ಖರೀದಿಸಿದ ಆಸ್ತಿಗೆ ಅನ್ವಯಿಸುವುದಿಲ್ಲ. ಅದು ಪತ್ನಿಯ ಸ್ವಾಧೀನಪಡಿಸಿಕೊಂಡ ಆಸ್ತಿಯಾಗಿದ್ದು, ಅದಕ್ಕೆ ಬೇರೆ ನಿಯಮಗಳಿವೆ. ಈ ತೀರ್ಪು ಪೋಷಕರಿಂದ ಉತ್ತರಾಧಿಕಾರವಾಗಿ ಬಂದ ಸ್ವತ್ತಿಗೆ ಮಾತ್ರ ಅನ್ವಯಿಸುತ್ತದೆ.

Exit mobile version