ಫೋನ್ ಬಳಸಿದ್ದಕ್ಕೆ ಹೆಂಡತಿ ಕೊಂದು ಶವವನ್ನು ಮನೆಯಲ್ಲೇ ಹೂತು ಹಾಕಿದ ಪತಿ

Untitled design 2025 12 26T212525.179

ಗೋರಖ್‌ಪುರ (ಉತ್ತರಪ್ರದೇಶ): ಹೆಂಡತಿ ಗುಪ್ತವಾಗಿ ಮೊಬೈಲ್ ಫೋನ್ ಬಳಸುತ್ತಾಳೆ ಎಂಬ ಕಾರಣಕ್ಕೆ ಪತಿಯೊಬ್ಬ ಆಕೆಯನ್ನು ಕೊಂದು, ಮನೆಯ ಹಿಂಭಾಗದಲ್ಲೇ ಗುಂಡಿ ತೋಡಿ ಹೂತು ಹಾಕಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಗೋರಖ್‌ಪುರದಲ್ಲಿ ಬೆಳಕಿಗೆ ಬಂದಿದೆ. ದೃಶ್ಯಂ ಸಿನಿಮಾವನ್ನು ಹೋಲುವ ಈ ಭೀಕರ ಕೊಲೆ ಪ್ರಕರಣದಲ್ಲಿ ಆರೋಪಿಯು ಪೊಲೀಸರನ್ನು ದಾರಿ ತಪ್ಪಿಸಲು ಸಾಕಷ್ಟು ಯತ್ನಿಸಿದರೂ, ಕೊನೆಗೆ ಸತ್ಯ ಹೊರಬಿದ್ದಿದೆ.

ಡಿಸೆಂಬರ್ 21ರಂದು ನಡೆದ ಈ ಘಟನೆಯಲ್ಲಿ ಖುಷ್ಬೂ ಎಂಬ ಮಹಿಳೆಯನ್ನು ಆಕೆಯ ಪತಿ ಅರ್ಜುನ್ ಕೊಲೆ ಮಾಡಿದ್ದಾನೆ. ಲುಧಿಯಾನದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅರ್ಜುನ್, ಡಿಸೆಂಬರ್ 21ರಂದು ಗೋರಖ್‌ಪುರದಲ್ಲಿರುವ ತನ್ನ ಮನೆಗೆ ಮರಳಿದ್ದಾನೆ. ಮನೆಗೆ ಬಂದ ವೇಳೆ ಖುಷ್ಬೂ ರಹಸ್ಯವಾಗಿ ಮೊಬೈಲ್ ಬಳಸುತ್ತಿರುವುದನ್ನು ಕಂಡು ಅನುಮಾನಗೊಂಡ ಆತ, ಈ ವಿಚಾರವಾಗಿ ಹೆಂಡತಿಯೊಂದಿಗೆ ಜಗಳ ಮಾಡಿದ್ದಾನೆ.

ಮೊಬೈಲ್ ಬಳಕೆಯ ವಿಚಾರ ಜಗಳಕ್ಕೆ ತಿರುಗಿದ್ದು, ಕೋಪದಿಂದ ಅರ್ಜುನ್ ಖುಷ್ಬೂವನ್ನು ಥಳಿಸಿ ಕೊಂದಿದ್ದಾನೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಆಕೆಯ ಶವವನ್ನು ಹಾಸಿಗೆಯಲ್ಲಿ ಮಡಚಿ, ಮನೆಯ ಹಿಂದಿನ ಭಾಗದಲ್ಲಿ ಗುಂಡಿ ತೋಡಿ ಹೂತು ಹಾಕಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ಬಳಿಕ ಆರೋಪಿಯು ತನ್ನ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಕುಟುಂಬಸ್ಥರು ಹಾಗೂ ನೆರೆಹೊರೆಯವರಿಗೆ ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹಲವಾರು ದಿನಗಳಾದರೂ ಖುಷ್ಬೂ ಕುರಿತು ಯಾವುದೇ ಮಾಹಿತಿ ಲಭ್ಯವಾಗದೇ ಇದ್ದುದರಿಂದ ಆಕೆಯ ತಂದೆ-ತಾಯಿ ಹಾಗೂ ಸಂಬಂಧಿಕರು ಆತಂಕಗೊಂಡಿದ್ದರು. ಈ ನಡುವೆ ಅರ್ಜುನ್‌ನ ಮಾವ, “ನನ್ನ ಮಗಳನ್ನು ಅವನೇ ಕೊಂದಿರಬಹುದು” ಎಂಬ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ದಾಖಲಿಸಿದರು.

ನಾಪತ್ತೆ ಪ್ರಕರಣದಡಿ ತನಿಖೆ ಆರಂಭಿಸಿದ ಪೊಲೀಸರು ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ಮೊದಲಿಗೆ “ಖುಷ್ಬೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಶವವನ್ನು ನದಿಗೆ ಎಸೆದಿದ್ದೇನೆ” ಎಂದು ಸುಳ್ಳು ಹೇಳಿದ್ದಾನೆ.

ಕಠಿಣ ವಿಚಾರಣೆಯ ಬಳಿಕ ಕೊನೆಗೆ ಅರ್ಜುನ್ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆಯ ಆಧಾರದಲ್ಲಿ ಪೊಲೀಸರು ಮನೆಯ ಹಿಂಭಾಗದ ಗುಂಡಿಯನ್ನು ತೋಡಿ ನೋಡಿದಾಗ, ಅಲ್ಲಿ ಹೂತು ಹಾಕಿದ್ದ ಖುಷ್ಬೂ ಶವ ಪತ್ತೆಯಾಗಿದೆ. ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಮೃತಳ ಕಿರಿಯ ಸಹೋದರ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಅರ್ಜುನ್‌ನನ್ನು ಬಂಧಿಸಲಾಗಿದೆ ಎಂದು ಗೋರಖ್‌ಪುರ ವೃತ್ತಾಧಿಕಾರಿ ಶಿಲ್ಪಾ ಕುಮಾರಿ ತಿಳಿಸಿದ್ದಾರೆ.

Exit mobile version