ಉತ್ತರಾಖಂಡ/ ರಾಮನಗರ: ಮಾದಕ ವ್ಯಸನಕ್ಕೆ ಬಲಿಯಾದ 17 ವರ್ಷದ ಬಾಲಕಿಯೊಬ್ಬಳು ಹಲವಾರು ಪುರುಷರೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು, ಕನಿಷ್ಠ 19 ಜನರಿಗೆ HIV ಹರಡಿದ್ದಾಳೆ. ಈ ಘಟನೆ ಉತ್ತರಾಖಂಡದ ರಾಮನಗರ ಪಟ್ಟಣದ ಗುಲರ್‌ಘಟ್ಟಿ ಪ್ರದೇಶದಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಬೆಳಕಿಗೆ ಬಂದಿದೆ. ಈ ಬಾಲಕಿ ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದವಳಾಗಿದ್ದು, ಹೆರಾಯಿನ್ (ಡ್ರಗ್) ಸೇವನೆಗೆ ತನ್ನ ಲೈಂಗಿಕ ಸಂಪರ್ಕದಿಂದ ಬಂದ ಹಣವನ್ನು ಖರ್ಚು ಮಾಡುತ್ತಿದ್ದಳು ಎನ್ನಲಾಗಿದೆ.
ಈ ಘಟನೆಯಲ್ಲಿ ಆಕೆಯೊಂದಿಗೆ ಸಂಪರ್ಕ ಹೊಂದಿದವರಲ್ಲಿ ವಿವಾಹಿತ ಪುರುಷರೂ ಸೇರಿದ್ದಾರೆ. ಆಕೆಗೆ ಎಚ್‌ಐವಿ ಇದೆ ಎಂದು ಅವರಿಗೆ ತಿಳಿದಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿ, ಕೆಲವು ವಿವಾಹಿತ ಪುರುಷರಿಂದ ತಮ್ಮ ಪತ್ನಿಯರಿಗೂ ವೈರಸ್ ಹರಡಿದೆ.
ತನಿಖೆ ಮತ್ತು ಆರೋಗ್ಯ ತಪಾಸಣೆ
ಗುಲರ್‌ಘಟ್ಟಿ ಪ್ರದೇಶದಲ್ಲಿ ಹಲವಾರು ಯುವಕರು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್ (ಐಸಿಟಿಸಿ) ಗೆ ಭೇಟಿ ನೀಡಿದಾಗ, ಎಚ್‌ಐವಿ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ನಂತರ ತನಿಖೆಯಲ್ಲಿ, ಈ ಬಾಲಕಿಯೇ ವೈರಸ್ ಹರಡಿರುವ ಸಾಧ್ಯತೆ ಇದೆ ಎಂಬುವುದು ಬೆಳಕಿಗೆ ಬಂದಿತ್ತು. ಕೌನ್ಸೆಲಿಂಗ್ ಸಂದರ್ಭದಲ್ಲಿ, ಆಕೆ ದೀರ್ಘಕಾಲದಿಂದ ಸೋಂಕಿತ ಪುರುಷರೊಂದಿಗೆ ಲೈಂಗಿಕವಾಗಿ ಸಕ್ರಿಯವಾಗಿದ್ದಳು ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಈ ಘಟನೆಯ ವಿವರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದು ಶಿಕ್ಷಾರ್ಹ ಅಪರಾಧ ಎಂದು ಕೆಲವರು ಟೀಕಿಸಿದ್ದಾರೆ. “ವಿವಾಹಿತ ಪುರುಷರು ತಮ್ಮ ಪತ್ನಿಯರಿಗೆ ಮೋಸ ಮಾಡಿ, ಅಪ್ರಾಪ್ತ ಬಾಲಕಿಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಅಂತಹವರಿಗೆ ಈ ರೋಗವು ಸರಿಯಾದ ಶಿಕ್ಷೆಯೇ” ಎಂದು ಕೆಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇನ್ನೊಬ್ಬ ಬಳಕೆದಾರ, “ನಿಜವಾದ ಬಲಿಪಶುಗಳು ಈ ಅಸಹ್ಯಕರ ಪುರುಷರನ್ನು ಮದುವೆಯಾದ ಮಹಿಳೆಯರು. ಯಾವುದೇ ತಪ್ಪಿಲ್ಲದಿದ್ದರೂ ಅವರು ಈ ರೋಗದಿಂದ ಬಳಲುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ಈ ಪುರುಷರ ವಿರುದ್ಧ ಪೋಸ್ಕೋ (POCSO) ಕಾಯ್ದೆಯಡಿ ಕೇಸ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ.