ದೇವಸ್ಥಾನದ ಹುಂಡಿ ಕಾಸಿಗೆ ಕೈ ಹಾಕಿತಾ ಹಿಮಾಚಲ ಸರ್ಕಾರ

Befunky Collage 2025 03 01t110319.049

ಸಾಕಷ್ಟು ಗ್ಯಾರಂಟಿಗಳನ್ನು ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಸರ್ಕಾರ, ‘ಮುಜರಾಯಿ ಇಲಾಖೆ ಅಡಿ ಬರುವ ದೇವಾಲಯಗಳು ಸರ್ಕಾರದ 2 ಯೋಜನೆಗಳಿಗೆ ದೇಣಿಗೆ ನೀಡಬಹುದು’ ಎಂದು ಕೋರಿಕೆ ಸಲ್ಲಿಸಿದೆ. ಮುಖ್ಯಮಂತ್ರಿ ಸುಖು ಸರ್ಕಾರದ ಈ ಆದೇಶ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಜೊತೆಗೆ ಬಿಜೆಪಿ ಕೆಂಗಣ್ಣಿಗೆ ಕಾರಣವಾಗಿದೆ.
‘ದೇಗುಲಗಳಿಂದ ಸರ್ಕಾರ ಹಣ ಕೇಳುವುದು ಆಘಾತಕಾರಿ. ಹಿಂದಿನ ಯಾವುದೇ ಸರ್ಕಾರವು ಬಜೆಟ್ ಯೋಜನೆಗಳಿಗೆ ದೇವಾಲಯದ ಟ್ರಸ್ಟ್ ನಿಧಿಯನ್ನು ಬಳಸಿಲ್ಲ’ ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಜೈರಾಮ್ ಠಾಕೂ‌ರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ ಕಾಂಗ್ರೆಸ್‌ ಈ ಆರೋಪ ತಳ್ಳಿಹಾಕಿದೆ. ‘ದೇಗುಲಗಳಿಂದ ಮಾತ್ರವಲ್ಲ. ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಈ ಯೋಜನೆಗಳಿಗೆ ಎಲ್ಲ ವರ್ಗಗಳಿಂದ ಹಣ ಕೇಳಲಾಗಿದೆ’ ಎಂದು ಸಮರ್ಥಿಸಿದೆ.
ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಅಧಿಸೂಚನೆ ಹೊರಡಿಸಿ, ‘ಹಿಮಾಚಲ ಪ್ರದೇಶ ಹಿಂದೂ ಸಾರ್ವಜನಿಕ ಧಾರ್ಮಿಕ ಸಂಸ್ಥೆಗಳ ದತ್ತಿ ಕಾಯ್ದೆಯಡಿ ನಿರ್ವಹಿಸುತ್ತಿರುವ ವಿವಿಧ ದೇವಾಲಯ ಟ್ರಸ್ಟ್ ಗಳು ಮುಖ್ಯಮಂತ್ರಿ ಸುಖ ಆಶ್ರಯ ಮತ್ತು ಮುಖ್ಯಮಂತ್ರಿ ಸುಖ ಶಿಕ್ಷಾ ಯೋಜನೆಗೆ ದೇಣಿಗೆ ನೀಡಬಹುದು. ಆದರೆ ದೇಣಿಗೆಗೆ ಟ್ರಸ್ಟ್ ಒಪ್ಪಿಗೆ ಕಡ್ಡಾಯ’ ಎಂದು ಹೇಳಿತ್ತು.
ಆರ್ಥಿಕ ಸಂಕಟ: ಹಿಮಾಚಲ ಸರ್ಕಾರ ಸಾಕಷ್ಟು
ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ಹಾಗೂ ಮಳೆಯಂಥ ಪ್ರಾಕೃತಿಕ ವಿಕೋಪಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದೆ. ಹೀಗಾಗಿ ಸಿಎಂ ಸುಖವಿಂದ‌ರ್ ಸಿಂಗ್ ಸುಖು, ‘ಎಲ್ಲ ಶಾಸಕ, ಸಚಿವರು 2 ತಿಂಗಳ ವೇತನ ಪಡೆಯದೇ ಸರ್ಕಾರದ ಬೊಕ್ಕಸಕ್ಕೆ ನೆರವಾಗಬೇಕು’ ಎಂದು ಸೂಚಿಸಿದ್ದರು.

Exit mobile version