ಶಿಮ್ಲಾ: ಕಳೆದ 17 ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ 19 ಮೇಘಸ್ಫೋಟಗಳು ಸಂಭವಿಸಿದ್ದು, 82 ಮಂದಿ ಮೃತಪಟ್ಟಿದ್ದಾರೆ. ಜೂನ್ 20 ರಿಂದ ಜುಲೈ 6 ರವರೆಗೆ ರಾಜ್ಯದಲ್ಲಿ 19 ಮೇಘಸ್ಫೋಟಗಳು, 23 ಪ್ರವಾಹ ಘಟನೆಗಳು ಮತ್ತು 19 ಭೂಕುಸಿತಗಳು ದಾಖಲಾಗಿವೆ. ಈ ಅವಘಡಗಳಿಂದ 269 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ.
ಮಧ್ಯಪ್ರದೇಶದಲ್ಲಿ ಪ್ರವಾಹದ ಆರ್ಭಟ:
ಮಧ್ಯಪ್ರದೇಶದ ಶಹದೋಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ 4 ಇಂಚು ಮಳೆ ಸುರಿದಿದ್ದು, 3,000 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಆಸ್ಪತ್ರೆಯೊಂದಕ್ಕೆ ನೀರು ನುಗ್ಗಿದ್ದರಿಂದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಯಿತು. ರೈಲ್ವೆ ಹಳಿಗಳು ಮುಳುಗಿದ್ದರಿಂದ ರೈಲು ಸೇವೆಗಳು 4 ಗಂಟೆಗಳ ಕಾಲ ಸ್ಥಗಿತಗೊಂಡವು.
ಉತ್ತರಾಖಂಡದಲ್ಲಿ ಭಾರೀ ಮಳೆಯಿಂದ ಕುಸಿತ:
ಉತ್ತರಾಖಂಡದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಯಮುನೋತ್ರಿ ಹೆದ್ದಾರಿಯ ಓಜ್ರಿ ಬಳಿ ಸೇತುವೆ ಕುಸಿದಿದೆ. ಇದರಿಂದ ಹತ್ತಿರದ ಪ್ರದೇಶಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಶ್ರೀನಗರದಲ್ಲಿ ಭೂಕುಸಿತದಿಂದ ಬದರೀನಾಥ್ ಹೆದ್ದಾರಿ ಬಂದ್ ಆಗಿದೆ.
ಅಯೋಧ್ಯೆಯಲ್ಲಿ ಸರಯು ನದಿಯ ನೀರಿನ ಮಟ್ಟ 91.35 ಮೀಟರ್ ತಲುಪಿದ್ದು, ಎಚ್ಚರಿಕೆ ಮಟ್ಟಕ್ಕಿಂತ ಕೇವಲ 20 ಸೆಂ.ಮೀ. ಕೆಳಗಿದೆ. ಕಳೆದ 24 ಗಂಟೆಗಳಲ್ಲಿ 24 ಸೆಂ.ಮೀ. ಏರಿಕೆ ಕಂಡಿದೆ. ಕಾನ್ಪುರದಲ್ಲಿ ಗಂಗಾ ನದಿಯ ತಗ್ಗು ಪ್ರದೇಶಗಳು ಪ್ರವಾಹದ ಅಪಾಯದಲ್ಲಿವೆ.