ಕಾರಿಗೆ 3,400 ಕಿಸ್ ಕೊಟ್ಟ ಗರ್ಲ್‌ಫ್ರೆಂಡ್; ₹5,500 ಫೈನ್ ಕಟ್ಟಿದ ಬಾಯ್‌ಫ್ರೆಂಡ್‌!

ಮಾರಾಟ (10)

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್ ನಗರದಲ್ಲಿ ಸುಮಾರು 3,400 ಲಿಪ್ಸ್ಟಿಕ್ ಮುತ್ತಿನ ಗುರುತುಗಳಿಂದ ಆವೃತವಾಗಿದ್ದ ಕಾರೊಂದು ನೆಟ್ಟಿಗರ ಮತ್ತು ಸಾರ್ವಜನಿಕರ ಗಮನ ಸೆಳೆದು ಭಾರೀ ವೈರಲ್ ಆಗಿತ್ತು. ಆದರೆ, ಈ ವಿಚಿತ್ರ ಅಲಂಕಾರ ಮತ್ತು ಫ್ಯಾಶನ್ ಉಸಾಬರಿಯು ಕೊನೆಗೆ ಕಾರಿನ ಮಾಲೀಕನಿಗೆ ಸಂಚಾರ ಪೊಲೀಸರಿಂದ ಭಾರಿ ದಂಡ ಬೀಳುವಂತೆ ಮಾಡಿದೆ.

ಏನಿದು ‘ಕಿಸ್ ಕಾರ್’ ಕಹಾನಿ?

ಗ್ವಾಲಿಯರ್ನ ಯುವಕ ಆದಿತ್ಯ ಶಿಕಾರ್ವಾರ್ ಎಂಬುವವರಿಗೆ ಸೇರಿದ ಈ ಕಾರಿನ ಸಂಪೂರ್ಣ ಹೊರಭಾಗಕ್ಕೆ ಲಿಪ್ಸ್ಟಿಕ್‌ನಿಂದ ಸಾವಿರಾರು ‘ಕಿಸ್’ ಮಾರ್ಕ್ ಗಳನ್ನು ಹಾಕಲಾಗಿತ್ತು. ಈ ವಿಶಿಷ್ಟ ಕಾರಿನ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾರಿನ ಹಿಂದಿರುವ ಕಥೆಯೇನು ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿತ್ತು.

ವಿದೇಶಿ ಸೋಶಿಯಲ್ ಮೀಡಿಯಾ ಟ್ರೆಂಡ್ ಒಂದರಿಂದ ಪ್ರೇರಿತರಾಗಿ ಈ ಸಾಹಸಕ್ಕೆ ಕೈಹಾಕಲಾಗಿತ್ತು. ಆದಿತ್ಯ ಅವರ ಗೆಳತಿಯು ಈ ಟ್ರೆಂಡ್ ಅನ್ನು ಮರುಸೃಷ್ಟಿಸಲು ಕಾರಿನ ಮೇಲೆ ಒಂದೊಂದಾಗಿ ಪ್ರತ್ಯೇಕವಾಗಿ ಸುಮಾರು ನಾಲ್ಕು ಗಂಟೆಗಳ ಕಾಲ ಶ್ರಮಿಸಿ, ಬರೋಬ್ಬರಿ 3,400 ಲಿಪ್ಸ್ಟಿಕ್ ಮುದ್ದಿನ ಗುರುತುಗಳನ್ನು ಒತ್ತಿದ್ದರು.

ಈ ಕಾರು ಗ್ವಾಲಿಯರ್ ನಗರದ ರಸ್ತೆಗಳಲ್ಲಿ ಸಂಚರಿಸಲು ಪ್ರಾರಂಭಿಸುತ್ತಿದ್ದಂತೆ, ದಾರಿಯುದ್ದಕ್ಕೂ ಜನರು ಆಶ್ಚರ್ಯದಿಂದ ನೋಡಲು ತೊಡಗಿದ್ದರು. ಅನೇಕರು ಫೋಟೋಗಳನ್ನು ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು. ಕೆಲವೇ ಗಂಟೆಗಳಲ್ಲಿ ಈ ಕಾರಿನ ಚಿತ್ರಗಳು ದೇಶಾದ್ಯಂತ ವೈರಲ್ ಆದವು.

ಸಂಚಾರ ಪೊಲೀಸರ ಕ್ರಮ

ಜಾಲತಾಣಗಳಲ್ಲಿ ವೈರಲ್ ಆದ ಈ ವೀಡಿಯೊ ಹಾಗೂ ಫೋಟೋಗಳು ಕೇವಲ ಸಾರ್ವಜನಿಕರ ಗಮನ ಅಷ್ಟೇ ಅಲ್ಲದೆ ಸಂಚಾರ ಪೊಲೀಸರ ಕಣ್ಣಿಗೂ ಬಿದ್ದವು. ವೀಡಿಯೊದಲ್ಲಿದ್ದ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ತನಿಖೆ ನಡೆಸಿದ ಸಂಚಾರ ಪೊಲೀಸರು, ಕಾರನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು. ಬಳಿಕ ಕಾರಿನ ಮಾಲೀಕ ಆದಿತ್ಯ ಅವರನ್ನು ಕಚೇರಿಗೆ ಕರೆಸಿ ವಿಚಾರಣೆ ನಡೆಸಿದರು.

₹5,500 ದಂಡ

ಮೋಟಾರು ವಾಹನ ಕಾಯ್ದೆ ಮತ್ತು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಮೂಲ ರೂಪಕ್ಕೆ ಧಕ್ಕೆ ತರುವಂತೆ ಅತಿಯಾದ ಮಾರ್ಪಾಡು ಮಾಡಿದ್ದಕ್ಕಾಗಿ ಸಂಚಾರ ಪೊಲೀಸರು ಮಾಲೀಕನಿಗೆ ₹5,500 ರೂಪಾಯಿ ದಂಡ (ಚಲನ್) ವಿಧಿಸಿದರು. ಪೊಲೀಸರ ಕಟ್ಟುನಿಟ್ಟಿನ ಕ್ರಮದ ನಂತರ, ತಮ್ಮ ತಪ್ಪನ್ನು ಒಪ್ಪಿಕೊಂಡ ಆದಿತ್ಯ ದಂಡದ ಮೊತ್ತವನ್ನು ಪಾವತಿಸಿದ್ದಾರೆ.

ತದನಂತರ ಕಾರಿನ ಮೇಲಿದ್ದ ಸಾವಿರಾರು ಲಿಪ್ಸ್ಟಿಕ್ ಗುರುತುಗಳನ್ನು ಸಂಪೂರ್ಣವಾಗಿ ತೊಳೆದು, ವಾಹನವನ್ನು ಮತ್ತೆ ಅದರ ಹಳೆಯ ಹಾಗೂ ಮೂಲ ರೂಪಕ್ಕೆ ತರಲಾಯಿತು. ಆದಿತ್ಯ ಅವರು ತಾವು ಮಾಡಿದ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದು, “ಸೋಶಿಯಲ್ ಮೀಡಿಯಾ ಟ್ರೆಂಡ್ಗೆ ಮರುಳಾಗಿ ನಾನು ಈ ತಪ್ಪು ಮಾಡಿದೆ. ಭವಿಷ್ಯದಲ್ಲಿ ಇಂತಹ ಪ್ರಯೋಗಗಳನ್ನು ಮಾಡುವುದಿಲ್ಲ” ಎಂದು ಹೇಳಿದ್ದಾರೆ.

ಸಾರ್ವಜನಿಕರ ಪ್ರತಿಕ್ರಿಯೆ

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕೆಲವರು ಸಂಚಾರ ಪೊಲೀಸರ ಕ್ರಮವನ್ನು ಪ್ರಶಂಸಿಸಿದರೆ, ಇನ್ನು ಕೆಲವರು ವೈರಲ್ ಆಗುವ ಉನ್ಮಾದದಲ್ಲಿ ಯುವಕರು ಮಾಡುವ ಅತಿರೇಕಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಟ್ರೆಂಡ್ಗಳು ಕಾನೂನು ಮತ್ತು ಸಾರ್ವಜನಿಕ ಸ್ಥಳಗಳ ನಿಯಮಗಳನ್ನು ಉಲ್ಲಂಘಿಸುವಂತಿಲ್ಲ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದ್ದಾರೆ.

Exit mobile version