ಗುರುಗ್ರಾಮ: ದೇಶದ ಪ್ರಮುಖ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದ 32ನೇ ಅವೆನ್ಯೂ ವಾಣಿಜ್ಯ ಸಂಕೀರ್ಣ ಇದೀಗ ಭಾರೀ ವಂಚನೆ ಪ್ರಕರಣದ ಕೇಂದ್ರಬಿಂದು ಆಗಿದೆ. ಒಂದೇ ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿ ಸುಮಾರು ₹500 ಕೋಟಿ ರೂ. ಆರ್ಥಿಕ ವಂಚನೆ ನಡೆಸಿದ ಆರೋಪದಡಿ, ಈ ಯೋಜನೆಯ ಸ್ಥಾಪಕ ಹಾಗೂ ಸಿಇಒ ಧ್ರುವ್ ದತ್ ಶರ್ಮಾ ಅವರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ.
ಆರ್ಥಿಕ ಅಪರಾಧ ವಿಭಾಗ (EOW) ನಡೆಸಿದ ಸುದೀರ್ಘ ತನಿಖೆಯ ಬಳಿಕ ಶುಕ್ರವಾರ ಶರ್ಮಾ ಅವರನ್ನು ಬಂಧಿಸಲಾಗಿದ್ದು, ನಂತರ ನಗರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ಆರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಪೊಲೀಸರ ಮಾಹಿತಿ ಪ್ರಕಾರ, ಶರ್ಮಾ ತನ್ನ ಸಹಚರರೊಂದಿಗೆ ಸೇರಿ 32ನೇ ಅವೆನ್ಯೂ ವಾಣಿಜ್ಯ ಸಂಕೀರ್ಣದಲ್ಲಿನ ಒಂದೇ ಮಹಡಿಯ ಆಸ್ತಿಯನ್ನು ಅನೇಕ ಹೂಡಿಕೆದಾರರಿಗೆ ಮಾರಾಟ ಮಾಡಿದ್ದಾನೆ. ಪ್ರಾಥಮಿಕ ತನಿಖೆಯಲ್ಲೇ ಈ ವಂಚನೆಯ ಮೊತ್ತವು ಸುಮಾರು ₹500 ಕೋಟಿ ರೂ.ಗೆ ತಲುಪಿರುವುದು ಬಹಿರಂಗವಾಗಿದೆ.
ಈ ಪ್ರಕರಣದ ದೂರು ಟ್ರಾಮ್ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ದಾಖಲಾಗಿದೆ. ದೂರುದಾರ ಸಂಸ್ಥೆಯ ಪ್ರಕಾರ, 2021ರಲ್ಲಿ 32ನೇ ಅವೆನ್ಯೂ ಸಂಕೀರ್ಣದ ಮೊದಲ ಮಹಡಿಯಲ್ಲಿ ಇರುವ 3,000 ಚದರ ಅಡಿ ವಿಸ್ತೀರ್ಣದ ಯೂನಿಟ್ ನಂ.24 ಅನ್ನು ಮಾರಾಟ ಮಾಡುವ ಒಪ್ಪಂದಕ್ಕೆ ಆರೋಪಿತ ಸಂಸ್ಥೆಯ ನಿರ್ದೇಶಕರು ಹಾಗೂ ಷೇರುದಾರರು ಮುಂದಾಗಿದ್ದರು. ಈ ಆಸ್ತಿಯ ಮಾರಾಟ ಮೊತ್ತವನ್ನು ₹2.5 ಕೋಟಿ ರೂ. ಎಂದು ನಿಗದಿಪಡಿಸಲಾಗಿದ್ದು, ಸೆಪ್ಟೆಂಬರ್ 21, 2021ರಂದು ಸಂಪೂರ್ಣ ಹಣ ಪಾವತಿಸಲಾಗಿದೆ.
ಆದರೆ ಹಣ ಪಾವತಿಯಾದ ಬಳಿಕವೂ ಆಸ್ತಿಗೆ ಸಂಬಂಧಿಸಿದ ಅಗತ್ಯ ಕಾನೂನು ದಾಖಲೆಗಳು, ನೋಂದಣಿ ಪತ್ರಗಳು ಹಾಗೂ ಮಾಲೀಕತ್ವ ದಾಖಲೆಗಳು ದೂರುದಾರ ಸಂಸ್ಥೆಗೆ ಲಭ್ಯವಾಗಿರಲಿಲ್ಲ. ಹಲವು ಬಾರಿ ಮನವಿ ಮಾಡಿದರೂ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಟ್ರಾಮ್ ವೆಂಚರ್ಸ್ ಸಂಸ್ಥೆ ಪೊಲೀಸರನ್ನು ಸಂಪರ್ಕಿಸಿತು.
ಪೊಲೀಸರು ನಡೆಸಿದ ತನಿಖೆಯಲ್ಲಿ ಆಘಾತಕಾರಿ ಸತ್ಯ ಬಹಿರಂಗವಾಗಿದೆ. 2022 ಮತ್ತು 2023ರ ಅವಧಿಯಲ್ಲಿ, ಅದೇ ಯೂನಿಟ್ ನಂ.24ಕ್ಕೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು 25ಕ್ಕೂ ಹೆಚ್ಚು ವ್ಯಕ್ತಿಗಳ ಹೆಸರಿನಲ್ಲಿ ನೋಂದಾಯಿಸಿರುವುದು ಪತ್ತೆಯಾಗಿದೆ. ಇದರಿಂದ ಒಂದೇ ಆಸ್ತಿಯನ್ನು ಅನೇಕ ಜನರಿಗೆ ಮಾರಾಟ ಮಾಡಿ ಹಣ ಸಂಗ್ರಹಿಸಿರುವುದು ಸ್ಪಷ್ಟವಾಗಿದೆ.
EOW ಅಧಿಕಾರಿಗಳ ಪ್ರಕಾರ, ಈ ವಂಚನೆ ಪೂರ್ವನಿಯೋಜಿತವಾಗಿ, ವ್ಯವಸ್ಥಿತವಾಗಿ ನಡೆಸಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಧ್ರುವ್ ದತ್ ಶರ್ಮಾ 2021ರಲ್ಲಿ ದೂರುದಾರ ಸಂಸ್ಥೆಯೊಂದಿಗೆ ₹2.5 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಸದ್ಯ ಶರ್ಮಾರನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ನಿರ್ದೇಶಕರು, ಪಾಲುದಾರರು ಹಾಗೂ ಹಣಕಾಸು ಮಧ್ಯವರ್ತಿಗಳ ಪಾತ್ರವಿದೆಯೇ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ವಂಚನೆಗೆ ಸಂಬಂಧಿಸಿದ ಹಣದ ಹರಿವು, ಬ್ಯಾಂಕ್ ಖಾತೆಗಳು ಹಾಗೂ ವಿದೇಶಿ ವ್ಯವಹಾರಗಳ ಬಗ್ಗೆ ಕೂಡ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
