ನವದೆಹಲಿ: ಸಾಮಾಜಿಕ ಮಾಧ್ಯಮ ವೇದಿಕೆ X (ಹಳೆಯ ಟ್ವಿಟರ್) ನ AI ಸೇವೆಯಾದ “ಗ್ರೋಕ್” ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲ, ಅಸಭ್ಯ ಹಾಗೂ ಲೈಂಗಿಕವಾದ ಕಂಟೆಂಟ್ ರಚನೆಗೆ ಗ್ರೋಕ್ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ Xಗೆ ಕಠಿಣ ನೋಟಿಸ್ ನೀಡಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಹಾಗೂ ಐಟಿ ನಿಯಮಗಳು, 2021 ಅಡಿಯಲ್ಲಿ ವೇದಿಕೆಗಳಿಗೆ ವಿಧಿಸಲಾಗಿರುವ ಶಾಸನಬದ್ಧ ಡ್ಯೂ ಡಿಲಿಜೆನ್ಸ್ (Due Diligence) ಬಾಧ್ಯತೆಗಳನ್ನು X ಪಾಲಿಸಲು ವಿಫಲವಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ಸ್ಪಷ್ಟಪಡಿಸಿದೆ. ಈ ಹಿನ್ನೆಲೆ, ಮಹಿಳೆಯರ ಸುರಕ್ಷತೆ ಹಾಗೂ ಗೌಪ್ಯತೆ ಕುರಿತಂತೆ X ಗಂಭೀರವಾಗಿ ಕ್ರಮ ಕೈಗೊಳ್ಳಬೇಕೆಂದು ಸರ್ಕಾರ ಎಚ್ಚರಿಸಿದೆ.
MeitY ಕಳುಹಿಸಿರುವ ನೋಟಿಸ್‌ನಲ್ಲಿ, Xನ AI ಸೇವೆ ಗ್ರೋಕ್ ಅನ್ನು ಬಳಸಿಕೊಂಡು ಕೆಲವು ಬಳಕೆದಾರರು ಮಹಿಳೆಯರ ಫೋಟೋಗಳನ್ನು ಸಿಂಥೆಟಿಕ್ ರೀತಿಯಲ್ಲಿ ಬದಲಿಸಿ, ಅವಮಾನಕಾರಿ ಹಾಗೂ ಲೈಂಗಿಕವಾಗಿ ಪ್ರಚೋದಕ ಚಿತ್ರಗಳು ಮತ್ತು ವೀಡಿಯೊಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇಂತಹ ಕೃತ್ಯಗಳು ಮಹಿಳೆಯರ ಗೌಪ್ಯತೆ, ಘನತೆ ಮತ್ತು ಮಾನವ ಹಕ್ಕುಗಳಿಗೆ ಧಕ್ಕೆಯಾಗಿದೆ ಎಂದು ಸಚಿವಾಲಯ ಕಳವಳ ವ್ಯಕ್ತಪಡಿಸಿದೆ.
ಈ ರೀತಿಯ AI ದುರ್ಬಳಕೆ ಕೇವಲ ತಾಂತ್ರಿಕ ಸಮಸ್ಯೆಯಷ್ಟೇ ಅಲ್ಲ, ಅದು ಲೈಂಗಿಕ ಕಿರುಕುಳದ ಹೊಸ ರೂಪವಾಗಿ ಪರಿಣಮಿಸುತ್ತಿದೆ ಎಂದು ಸರ್ಕಾರ ಎಚ್ಚರಿಸಿದೆ. ಇಂತಹ ಕಂಟೆಂಟ್‌ಗಳು ಮಹಿಳೆಯರನ್ನು ಸಾಮಾಜಿಕವಾಗಿ ಅವಮಾನಿಸುವುದರ ಜೊತೆಗೆ, ಅವರ ಮಾನಸಿಕ ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರುತ್ತವೆ ಎಂದು MeitY ಅಭಿಪ್ರಾಯಪಟ್ಟಿದೆ.
ಈ ವಿಚಾರವನ್ನು ಮೊದಲಾಗಿ ಸಂಸತ್ತಿನ ಮಟ್ಟದಲ್ಲಿ ಎತ್ತಿ ಹಿಡಿದವರು ಶಿವಸೇನೆ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ. ಅವರು ಮಹಿಳೆಯರ ಸುರಕ್ಷತೆಯ ಕುರಿತು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದರು. ಆ ಪತ್ರದಲ್ಲಿ, Xನಲ್ಲಿ ಹೊಸದಾಗಿ ಅಪಾಯಕಾರಿ ಪ್ರವೃತ್ತಿ ಆರಂಭವಾಗಿದೆ ಎಂದು ಅವರು ಎಚ್ಚರಿಸಿದ್ದರು.
ಚತುರ್ವೇದಿ ಅವರು ಹೇಳಿರುವಂತೆ, ಕೆಲವರು ನಕಲಿ ಖಾತೆಗಳ ಮೂಲಕ ಮಹಿಳೆಯರ ಫೋಟೋಗಳನ್ನು ಪೋಸ್ಟ್ ಮಾಡಿ, ಗ್ರೋಕ್ AIಗೆ ಸೂಚನೆಗಳನ್ನು ನೀಡಿ ಮಹಿಳೆಯರ ಬಟ್ಟೆಗಳನ್ನು ಕಡಿಮೆ ಮಾಡುವಂತೆ ಅಥವಾ ಅವರನ್ನು ಲೈಂಗಿಕವಾಗಿ ಬಿಂಬಿಸುವಂತೆ ಚಿತ್ರಗಳನ್ನು ತಯಾರಿಸುತ್ತಿದ್ದಾರೆ. ಇದು ಕೇವಲ ಸೆಲೆಬ್ರಿಟಿಗಳು ಅಥವಾ ಸಾರ್ವಜನಿಕ ವ್ಯಕ್ತಿಗಳಿಗೆ ಸೀಮಿತವಾಗಿಲ್ಲ, ತಮ್ಮದೇ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಸಾಮಾನ್ಯ ಮಹಿಳೆಯರೂ ಈ ದುರ್ಬಳಕೆಗೆ ಗುರಿಯಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
“ಇದು AI ತಂತ್ರಜ್ಞಾನವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಳ್ಳುವ ಉದಾಹರಣೆ. ಮಹಿಳೆಯರನ್ನು ಡಿಜಿಟಲ್ ವೇದಿಕೆಗಳಲ್ಲಿ ಅಸುರಕ್ಷಿತಗೊಳಿಸುವ ಈ ಪ್ರವೃತ್ತಿಯನ್ನು ತಕ್ಷಣವೇ ನಿಲ್ಲಿಸಬೇಕು,” ಎಂದು ಚತುರ್ವೇದಿ ತಮ್ಮ ಪತ್ರದಲ್ಲಿ ಒತ್ತಾಯಿಸಿದ್ದರು. ಐಟಿ ಮತ್ತು ಸಂವಹನದ ಸ್ಥಾಯಿ ಸಮಿತಿಯ ಸದಸ್ಯೆಯಾಗಿ, X ತನ್ನ AI ಅಪ್ಲಿಕೇಶನ್‌ಗಳಲ್ಲಿ ಕಠಿಣ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಬೇಕೆಂದು ಅವರು ಆಗ್ರಹಿಸಿದ್ದರು.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಇದೀಗ Xಗೆ ಅಧಿಕೃತ ನೋಟಿಸ್ ನೀಡಿ ಸ್ಪಷ್ಟನೆ ಕೇಳಿದೆ. ಗ್ರೋಕ್‌ನಂತಹ AI ಸಾಧನಗಳು ಮಹಿಳೆಯರ ವಿರುದ್ಧ ದುರ್ಬಳಕೆಯಾಗದಂತೆ ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸುವಂತೆ ಸರ್ಕಾರ ಸೂಚಿಸಿದೆ.
