ನವದೆಹಲಿ, ಡಿಸೆಂಬರ್ 18: ಸಂಸತ್ತಿನ ಚಳಿಗಾಲದ ಅಧಿವೇಶನದ ವೇಳೆ ಲೋಕಸಭೆಯಲ್ಲಿ ಗ್ರಾಮೀಣ ಉದ್ಯೋಗಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಕಳೆದ ಎರಡು ದಶಕಗಳಿಂದ ಗ್ರಾಮೀಣ ಭಾರತದ ಬಡವರ ಜೀವನಾಧಾರವಾಗಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA)’ ಯನ್ನು ರದ್ದುಗೊಳಿಸಿ, ಅದರ ಬದಲಿಗೆ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಆಜೀವಿಕಾ ಮಿಷನ್ (ಗ್ರಾಮೀಣ)’- VB-G RAM G ಮಸೂದೆ-2025ಯನ್ನು ಸರ್ಕಾರ ಅಂಗೀಕರಿಸಿದೆ.
ಮಸೂದೆ ಅಂಗೀಕಾರದ ವೇಳೆ ಲೋಕಸಭೆಯಲ್ಲಿ ಭಾರೀ ಗದ್ದಲ ಉಂಟಾಯಿತು. ವಿರೋಧ ಪಕ್ಷದ ಸದಸ್ಯರು ಈ ಮಸೂದೆ ಮೂಲಕ ಮಹಾತ್ಮ ಗಾಂಧಿಯವರ ಹೆಸರನ್ನು ತೆಗೆದುಹಾಕಲಾಗಿದೆ. ಗ್ರಾಮೀಣ ಉದ್ಯೋಗ ಹಕ್ಕನ್ನು ದುರ್ಬಲಗೊಳಿಸಲಾಗಿದೆ ಎಂದು ಆರೋಪಿಸಿದರು. ಗದ್ದಲದ ಮಧ್ಯೆ ಕೆಲ ವಿಪಕ್ಷ ಸಂಸದರು ಮಸೂದೆಯ ಪ್ರತಿಗಳನ್ನು ಹರಿದು, ಸ್ಪೀಕರ್ ಕುರ್ಚಿಯ ಕಡೆಗೆ ಎಸೆದ ಘಟನೆ ಕೂಡ ನಡೆಯಿತು.
ವಿಪಕ್ಷಗಳ ಆಕ್ರೋಶಕ್ಕೆ ಕಾರಣವೇನು?
ವಿರೋಧ ಪಕ್ಷಗಳ ಪ್ರಕಾರ, MGNREGA ಕೇವಲ ಉದ್ಯೋಗ ಯೋಜನೆ ಮಾತ್ರವಲ್ಲ, ಅದು ಗ್ರಾಮೀಣ ಭಾರತಕ್ಕೆ ಸಾಮಾಜಿಕ-ಆರ್ಥಿಕ ಭದ್ರತೆಯನ್ನು ಒದಗಿಸಿದ ಐತಿಹಾಸಿಕ ಕಾಯ್ದೆ. ಅದರಲ್ಲಿ ಮಹಾತ್ಮ ಗಾಂಧಿಯವರ ಹೆಸರಿರುವುದು ಯೋಜನೆಗೆ ನೈತಿಕ ಶಕ್ತಿ ಮತ್ತು ಗುರುತು ನೀಡಿತ್ತು. ಆ ಹೆಸರನ್ನು ತೆಗೆದುಹಾಕುವುದು ಗಾಂಧೀಜಿಯವರಿಗೆ ಮಾಡಿದ ಅವಮಾನ ಮತ್ತು ಗ್ರಾಮೀಣ ಕಾರ್ಮಿಕರ ಹಕ್ಕಿನ ಮೇಲಿನ ದಾಳಿ ಎಂದು ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳು ವಾದಿಸಿವೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, “ಇದು ಕೆಲಸ ಮಾಡುವ ಹಕ್ಕಿನ ಮೇಲಿನ ದಾಳಿ. ಗ್ರಾಮೀಣ ಬಡವರಿಗೆ ಆರ್ಥಿಕ ಭದ್ರತೆ ನೀಡಿದ ಕಾಯ್ದೆಯನ್ನು ಸರ್ಕಾರ ದುರ್ಬಲಗೊಳಿಸುತ್ತಿದೆ” ಎಂದು ಕಿಡಿಕಾರಿದರು.
ಸರ್ಕಾರದ ಸಮರ್ಥನೆ ಏನು?
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ವಿಪಕ್ಷ ಆರೋಪಗಳನ್ನು ತಳ್ಳಿಹಾಕಿದರು. “2009ರ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕಾಗಿ ಮಹಾತ್ಮ ಗಾಂಧಿಯವರ ಹೆಸರನ್ನು NREGAಗೆ ಸೇರಿಸಲಾಗಿತ್ತು. ಹೊಸ ಮಸೂದೆ ಗ್ರಾಮೀಣ ಉದ್ಯೋಗವನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಿದೆ” ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕರು, ನೆಹರು-ಗಾಂಧಿ ಕುಟುಂಬದ ಹೆಸರಿನಲ್ಲಿರುವ ಅನೇಕ ಕಲ್ಯಾಣ ಯೋಜನೆಗಳ ಪಟ್ಟಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟೀಕೆಗೆ ತಿರುಗೇಟು ನೀಡಿದರು.
ಹಳೆಯ MGNREGA ಎಂದರೇನು?
2005ರಲ್ಲಿ ಜಾರಿಯಾದ MGNREGA, ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 100 ದಿನಗಳ ಖಾತರಿಪಡಿಸಿದ ಕೂಲಿ ಉದ್ಯೋಗ ನೀಡುವ ಗುರಿ ಹೊಂದಿತ್ತು. ಇದು ಗ್ರಾಮೀಣ ನಿರುದ್ಯೋಗ, ವಲಸೆ ಮತ್ತು ಬಡತನವನ್ನು ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಹೊಸ VB-G RAM G ಮಸೂದೆಯಲ್ಲಿ ಏನಿದೆ?
ಹೊಸ ಮಸೂದೆಯ ಮೂಲಕ 2005ರ MGNREGA ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುತ್ತಿದೆ. ಪ್ರಮುಖ ಅಂಶಗಳು ಹೀಗಿವೆ.
-
-
125 ದಿನಗಳ ಉದ್ಯೋಗ ಗ್ಯಾರಂಟಿ: ವರ್ಷಕ್ಕೆ 100 ದಿನಗಳ ಬದಲು 125 ದಿನಗಳ ಉದ್ಯೋಗ.
-
ಕೆಲಸದ ಸ್ವರೂಪದಲ್ಲಿ ಬದಲಾವಣೆ:
– ಜಲ ಭದ್ರತೆ
– ಗ್ರಾಮೀಣ ಮೂಲಸೌಕರ್ಯ
– ಜೀವನೋಪಾಯ ಸಂಬಂಧಿತ ಆಸ್ತಿ ನಿರ್ಮಾಣ
– ಹವಾಮಾನ ವೈಪರೀತ್ಯ ತಡೆಗಟ್ಟುವ ಕಾಮಗಾರಿಗಳು
-
-
ಕೃಷಿಗೆ ಅಡ್ಡಿಯಾಗದ ವ್ಯವಸ್ಥೆ: ಬಿತ್ತನೆ ಮತ್ತು ಸುಗ್ಗಿ ಸಮಯದಲ್ಲಿ ಕಾರ್ಮಿಕರ ಕೊರತೆ ತಪ್ಪಿಸಲು, ವರ್ಷದಲ್ಲಿ ಗರಿಷ್ಠ 60 ದಿನಗಳ ಕಾಲ ಯೋಜನೆಯ ಕೆಲಸವನ್ನು ಸ್ಥಗಿತಗೊಳಿಸುವ ಅಧಿಕಾರ ರಾಜ್ಯಗಳಿಗೆ.
ಯಾರಿಗೆ ಲಾಭ?
ಸರ್ಕಾರದ ಪ್ರಕಾರ, ಹೊಸ ಮಸೂದೆ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಹೆಚ್ಚುವರಿ ಆದಾಯ, ರೈತರಿಗೆ ಸಮಯಕ್ಕೆ ಕಾರ್ಮಿಕ ಲಭ್ಯತೆ, ಗ್ರಾಮ ಪಂಚಾಯಿತಿಗಳಿಗೆ ಶಾಶ್ವತ ಆಸ್ತಿಗಳ ನಿರ್ಮಾಣ ಮತ್ತು ಮಹಿಳೆಯರಿಗೆ ಮನೆಯ ಹತ್ತಿರವೇ ಉದ್ಯೋಗ ಅವಕಾಶ ನೀಡಲಿದೆ.
