ನವದೆಹಲಿ, ಡಿಸಂಬರ್ 4: ಮಿಜೋರಾಂನ ಮಾಜಿ ರಾಜ್ಯಪಾಲ ಹಾಗೂ ಹಿರಿಯ ವಕೀಲ ಸ್ವರಾಜ್ ಕೌಶಲ್ ಗುರುವಾರ ನಿಧನರಾದರು. ದಿವಂಗತ ಬಿಜೆಪಿ ಹಿರಿಯ ನಾಯಕಿ, ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಪತಿ ಮತ್ತು ನವದೆಹಲಿ ಸಂಸದೆ ಬನ್ಸುರಿ ಸ್ವರಾಜ್ ಅವರ ತಂದೆ.
ತಂದೆಯ ನಿಧನದ ನಂತರ ಬನ್ಸುರಿ ಸ್ವರಾಜ್ ಅವರು ಎಕ್ಸ್‌ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. “ನಿಮ್ಮ ನಿರ್ಗಮನವು ನಮ್ಮ ಹೃದಯದ ಮೇಲೆ ಆಳವಾದ ನೋವುಂಟುಮಾಡಿದೆ. ಆದರೆ ಮನಸ್ಸು ನಂಬುವಂತೆ, ನೀವು ಈಗ ಸರ್ವಶಕ್ತರ ಸನ್ನಿಧಿಯಲ್ಲಿ ತಾಯಿಯೊಂದಿಗೆ ಮತ್ತೆ ಒಂದಾಗಿರುವಿರಿ. ನಿಮ್ಮ ಮಗಳಾಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಹೆಮ್ಮೆ. ನಿಮ್ಮ ಮೌಲ್ಯಗಳು, ನಿಮ್ಮ ಆಶೀರ್ವಾದಗಳು ಮತ್ತು ನಿಮ್ಮ ಪರಂಪರೆ ನನ್ನ ಮುಂದಿನ ಜೀವನದ ದಾರಿದೀಪವಾಗಿರುತ್ತವೆ.” ಬನ್ಸುರಿಯ ಈ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸಾವಿರಾರು ಜನರು ಸಂತಾಪ ಸೂಚಿಸಿದ್ದಾರೆ.
ಸ್ವರಾಜ್ ಕೌಶಲ್ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲೇ ಭಾರತದ ಅತ್ಯಂತ ಕಿರಿಯ ರಾಜ್ಯಪಾಲ ಎಂಬ ಗೌರವವನ್ನು ಪಡೆದಿದ್ದರು. ಮಿಜೋರಾಂನಲ್ಲಿ ಅವರು ಮಾಡಿದ ಸೇವೆ, ಆಡಳಿತದ ದೃಢತೆ ಇಂದಿಗೂ ಜನರು ನೆನಪಿಸಿಕೊಳ್ಳುವಷ್ಟು ಮಹತ್ವದ್ದಾಗಿತ್ತು. ಮಿಜೋರಾಂನ ಪಾಲಿಟಿಕಲ್ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಮತ್ತು ರಾಜ್ಯದ ಶಾಂತಿ ಪ್ರಕ್ರಿಯೆಗೆ ಕೊಡುಗೆ ನೀಡುವಲ್ಲಿ ಅವರ ಪಾತ್ರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ವಕೀಲರಾಗಿ ತನ್ನ ವೈಯಕ್ತಿಕ ವೃತ್ತಿಜೀವನದಲ್ಲಿಯೂ ಸ್ವರಾಜ್ ಕೌಶಲ್ ಅವರು ಹೆಸರು ಗಳಿಸಿದ್ದರು.
ಸ್ವರಾಜ್ ಕೌಶಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿ, ಅವರು ರಾಷ್ಟ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸಿದರು. ಪ್ರಧಾನಿ ಮೋದಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದು, “ಸ್ವರಾಜ್ ಕೌಶಲ್ ಅವರು ಗಣ್ಯ ಕಾನೂನು ತಜ್ಞರಾಗಿದ್ದರು. ದೀನದಲಿತರ ಸೇವೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡ ಸಾರ್ವಜನಿಕ ವ್ಯಕ್ತಿ. ಮಿಜೋರಾಂ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಅವರು ಆ ರಾಜ್ಯದ ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿದ್ದರು. ಅವರ ಅಗಲಿಕೆಯು ದೊಡ್ಡ ನಷ್ಟ.” ಎಂದು ಮೋದಿ ಬರೆದಿದ್ದಾರೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ, ಮಾಜಿ ಕೇಂದ್ರ ಸಚಿವ ರವಿಶಂಕರ ಪ್ರಸಾದ್, ಅರುಣ ಜೇಟ್ಲಿ ಅವರ ಪತ್ನಿ ಸಂಗೀತಾ ಜೇಟ್ಲಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
