ಜಮ್ಮು ಕಾಶ್ಮೀರ್ : ತಿನ್ನುವುದು ಭಾರತದ ಅನ್ನ ಕೆಲಸ ಮಾಡುವ ಉಗ್ರರಿಗೆ. ಜಮ್ಮು ಮತ್ತು ಕಾಶ್ಮೀರದ ಆಡಳಿತಕ್ಕೆ ಸೇರಿಕೊಂಡು ಭಯೋತ್ಪಾದಕ ಜಾಲಗಳಿಗೆ ರಹಸ್ಯವಾಗಿ ನೆರವು ನೀಡುತ್ತಿದ್ದ ಐವರು ಸರ್ಕಾರಿ ನೌಕರರನ್ನು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸೇವೆಯಿಂದ ವಜಾಗೊಳಿಸಿದ್ದಾರೆ. ನಿಷೇಧಿತ ಉಗ್ರ ಸಂಘಟನೆಗಳಾದ ಹಿಜ್ಬ್-ಉಲ್-ಮುಜಾಹಿದ್ದೀನ್ ಮತ್ತು ಲಷ್ಕರ್-ಎ-ತೊಯ್ಬಾ ಜೊತೆ ನೇರ ನಂಟು ಹೊಂದಿದ್ದ ಆರೋಪದ ಮೇಲೆ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಆರೋಗ್ಯ ಇಲಾಖೆಯ ಚಾಲಕ ಮೊಹಮ್ಮದ್ ಯೂಸುಫ್ ಕುಮಾರ್ ಆಂಬ್ಯುಲೆನ್ಸ್ ಚಾಲಕನ ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ಉಗ್ರರಿಗೆ ಶಸ್ತ್ರಾಸ್ತ್ರ ಮತ್ತು ಹಣವನ್ನು ಸಾಗಿಸುತ್ತಿದ್ದ. ಕಳೆದ ಜುಲೈನಲ್ಲಿ ಈತನನ್ನು ತಡೆದಾಗ ಪಿಸ್ತೂಲ್, ಗ್ರೆನೇಡ್ ಮತ್ತು ₹5 ಲಕ್ಷ ನಗದು ಪತ್ತೆಯಾಗಿತ್ತು. ಈತ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಓವರ್ ಗ್ರೌಂಡ್ ವರ್ಕರ್ (OGW) ಎಂದು ಸಾಬೀತಾಗಿದೆ.
ಅರಣ್ಯ ಇಲಾಖೆಯ ಫಾರೂಕ್ ಅಹ್ಮದ್ ಭಟ್, 2005ರಲ್ಲಿ ಹಿಜ್ಬ್-ಉಲ್-ಮುಜಾಹಿದ್ದೀನ್ ಕಮಾಂಡರ್ ಮೊಹಮ್ಮದ್ ಅಮೀನ್ ಬಾಬಾ ಎಂಬಾತನನ್ನು ಸರ್ಕಾರಿ ವಾಹನದಲ್ಲೇ ಬೆಂಗಾವಲು ನೀಡಿ ಗಡಿ ದಾಟಿಸಿದ್ದ. ಈತ ಉಗ್ರರಿಗೆ ಆಶ್ರಯ ನೀಡಿ, ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ದಶಕಗಳಿಂದ ಸಕ್ರಿಯನಾಗಿದ್ದ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.
ಭದೇರ್ವಾದ ಶಿಕ್ಷಕ ಮೊಹಮ್ಮದ್ ಇಶ್ಫಾಕ್, ಲಷ್ಕರ್ ಉಗ್ರರೊಂದಿಗೆ ಸಂಪರ್ಕ ಹೊಂದಿದ್ದು, ಪೊಲೀಸ್ ಅಧಿಕಾರಿಯೊಬ್ಬರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ. ಶಿಕ್ಷಕನ ಹುದ್ದೆಯಲ್ಲಿದ್ದುಕೊಂಡು ಯುವಕರನ್ನು ಮೂಲಭೂತವಾದದತ್ತ ಸೆಳೆಯುತ್ತಿದ್ದ ಈತ, ಸದ್ಯ ಕೋಟ್ ಬಲ್ವಾಲ್ ಜೈಲಿನಲ್ಲಿದ್ದಾನೆ.
ಲ್ಯಾಬ್ ಟೆಕ್ನೀಷಿಯನ್ ತಾರಿಕ್ ಅಹ್ಮದ್ ರಾಹ್ ಮತ್ತು ವಿದ್ಯುತ್ ಇಲಾಖೆಯ ಸಹಾಯಕ ಲೈನ್‌ಮ್ಯಾನ್ ಬಶೀರ್ ಅಹ್ಮದ್ ಮಿರ್ ಕೂಡ ಉಗ್ರರಿಗೆ ಲಾಜಿಸ್ಟಿಕಲ್ ಬೆಂಬಲ ನೀಡುತ್ತಿದ್ದರು. ಬಶೀರ್ ಅಹ್ಮದ್ ಮಿರ್ ಮನೆಯಲ್ಲೇ 2021ರಲ್ಲಿ ಇಬ್ಬರು ಉಗ್ರರನ್ನು ಎನ್‌ಕೌಂಟರ್ ಮಾಡಲಾಗಿತ್ತು. ಇಷ್ಟಾದರೂ ಈತ ಜಾಮೀನಿನ ಮೇಲೆ ಹೊರಬಂದು ಮತ್ತೆ ಉಗ್ರರಿಗೆ ಹಾಗೂ ಅವರು ಮಾಡುವ ಕೃತ್ಯಗಳಿಗೆ ಬೆಂಬಲ ನೀಡುತ್ತಿದ್ದದ್ದು ತನಿಖೆಯಲ್ಲಿ ದೃಢಪಟ್ಟಿದೆ.
ರಾಷ್ಟ್ರೀಯ ಭದ್ರತೆಗೆ ಆದ್ಯತೆ:
ಈ ಐವರೂ ನೌಕರರು ತಮ್ಮ ಅಧಿಕೃತ ಗುರುತಿನ ಚೀಟಿ ಮತ್ತು ವಾಹನಗಳನ್ನು ಭದ್ರತಾ ಪಡೆಗಳ ಕಣ್ಣು ತಪ್ಪಿಸಲು ಬಳಸಿಕೊಳ್ಳುತ್ತಿದ್ದರು. ಈ ಒಳಸಂಚನ್ನು ಪತ್ತೆಹಚ್ಚಿರುವ ಭದ್ರತಾ ಸಂಸ್ಥೆಗಳು ನೀಡಿದ ವರದಿಯ ಆಧಾರದ ಮೇಲೆ, ಭಾರತೀಯ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ಇವರನ್ನು ವಜಾಗೊಳಿಸಲಾಗಿದೆ. .
