ಇರಾನ್: ಕಳೆದ ಎರಡು ವಾರಗಳಿಂದ ಇರಾನ್ ರಾಷ್ಟ್ರವ್ಯಾಪಿ ತೀವ್ರ ಅಶಾಂತಿ ಮತ್ತು ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ದೇಶದ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ಕಟ್ಟುನಿಟ್ಟಿನ ನೀತಿಗಳ ವಿರುದ್ಧ ಬೀದಿಗಿಳಿದ ಜನಸಾಮಾನ್ಯರ ಮೇಲೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಈಗ ಭೀಕರ ಸ್ವರೂಪ ಪಡೆದುಕೊಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇರಾನ್ ಸರ್ಕಾರವು ಸಾವಿನ ಸಂಖ್ಯೆಯ ಬಗ್ಗೆ ಮೌನ ಮುರಿದಿದ್ದು, ಸುಮಾರು 2,000 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಇರಾನ್‌ನ ಉನ್ನತ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ, ಪ್ರತಿಭಟನೆಗಳಲ್ಲಿ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು ಸೇರಿದಂತೆ ಒಟ್ಟು 2,000 ಮಂದಿ ಮೃತಪಟ್ಟಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಮಾನವ ಹಕ್ಕುಗಳ ಸಂಘಟನೆಗಳು ನೂರಾರು ಜನರ ಸಾವಿನ ಬಗ್ಗೆ ವರದಿ ಮಾಡಿದ್ದವು, ಆದರೆ ಸರ್ಕಾರದ ಈ ಇತ್ತೀಚಿನ ಹೇಳಿಕೆ ಪರಿಸ್ಥಿತಿಯ ಗಂಭೀರತೆಯನ್ನ ತಿಳಿಸಿದೆ. ಮೃತಪಟ್ಟವರಲ್ಲಿ ಯಾರು ಪ್ರತಿಭಟನಾಕಾರರು ಮತ್ತು ಯಾರು ಭದ್ರತಾ ಸಿಬ್ಬಂದಿ ಎಂಬ ನಿಖರ ವಿವರಗಳನ್ನು ನೀಡಲು ಸರ್ಕಾರ ನಿರಾಕರಿಸಿದೆ.
ದೇಶದಲ್ಲಿ ತಲೆದೋರಿರುವ ಕಠಿಣ ಆರ್ಥಿಕ ಪರಿಸ್ಥಿತಿ, ಹಣದುಬ್ಬರ ಮತ್ತು ನಿರುದ್ಯೋಗ ಜನರ ಆಕ್ರೋಶಕ್ಕೆ ಮುಖ್ಯ ಕಾರಣವಾಗಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನ ಕ್ಲೆರಿಕಲ್ ಆಡಳಿತ ಎದುರಿಸುತ್ತಿರುವ ಅತಿದೊಡ್ಡ ಆಂತರಿಕ ಸವಾಲು ಇದಾಗಿದೆ. ಒಂದು ಕಡೆ ಆರ್ಥಿಕ ಸಂಕಷ್ಟದ ಬಗ್ಗೆ ಇರುವ ಪ್ರತಿಭಟನೆಗಳು ನ್ಯಾಯಯುತ ಎಂದು ಹೇಳುವ ಸರ್ಕಾರ, ಇನ್ನೊಂದೆಡೆ ಪ್ರತಿಭಟನಾಕಾರರನ್ನು ಹತ್ತಿಕ್ಕಲು ತೀವ್ರ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಅಶಾಂತಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡವಿದೆ ಎಂದು ಇರಾನ್ ಗಂಭೀರವಾಗಿ ಆರೋಪಿಸಿದೆ. ಅಲ್ಲದೆ, ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಭಯೋತ್ಪಾದಕರು ಹೈಜಾಕ್ ಮಾಡಿದ್ದಾರೆ ಮತ್ತು ಅವರೇ ಹಿಂಸಾಚಾರಕ್ಕೆ ಕಾರಣ ಎಂದು ಸರ್ಕಾರಿ ಅಧಿಕಾರಿಗಳು ಹೇಳುತ್ತಿದ್ದಾರೆ. ಅನಾಮಧೇಯ ಗುಂಪುಗಳು ಜನರನ್ನು ಪ್ರಚೋದಿಸುತ್ತಿವೆ ಎಂಬುದು ಸರ್ಕಾರದ ವಾದವಾಗಿದೆ.
ಈ ಮಾಹಿತಿಯು ಇತರೆ ದೇಶಕ್ಕೆ ಹರಡುವುದನ್ನ ತಡೆಯಲು ಇರಾನ್ ಸರ್ಕಾರವು ಇಡೀ ದೇಶದಲ್ಲಿ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಿದೆ. ಆದರೂ, ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುತ್ತಿರುವ ವೀಡಿಯೊಗಳು ಅಲ್ಲಿನ ಅಶಾಂತಿ ಮತ್ತು ಭೀಕರತೆ ಬಗ್ಗೆ ತಿಳಿಸುತ್ತಿದೆ. ಸುಡುತ್ತಿರುವ ಕಾರುಗಳು, ಧಗಧಗಿಸುತ್ತಿರುವ ಕಟ್ಟಡಗಳು ಮತ್ತು ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸುತ್ತಿರುವ ಗುಂಡಿನ ದಾಳಿಯ ದೃಶ್ಯಗಳು ಜಾಗತಿಕ ಮಟ್ಟದಲ್ಲಿ ಆತಂಕ ಮೂಡಿಸಿವೆ. ಸಾವಿರಾರು ಜನರನ್ನು ಈಗಾಗಲೇ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
