ಜೈಪುರ: ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಪಿಎಸ್‌ಐ) ಆಗುವ ಕನಸು ಕಾಣುವವರು ವರ್ಷಗಟ್ಟಲೆ ಕಠಿಣ ಓದಿನ ತಯಾರಿ, ಪರೀಕ್ಷೆ, ಮತ್ತು ಸಂದರ್ಶನಕ್ಕೆ ತರಬೇತಿ ಪಡೆಯುತ್ತಾರೆ. ಆದರೆ, ರಾಜಸ್ಥಾನದ ಮೋನಾ ಬುಗಾಲಿಯಾ ಎಂಬಾಕೆ (ಅಲಿಯಾಸ್ ಮೂಲಿ ದೇವಿ) ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೂ, ಎರಡು ವರ್ಷಗಳ ಕಾಲ ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ (RPA) ಸಬ್-ಇನ್ಸ್‌ಪೆಕ್ಟರ್ ಎಂದು ಗುರುತಿಸಿಕೊಂಡು ತರಬೇತಿ ಪಡೆದಿದ್ದಾಳೆ. ಹಿರಿಯ ಅಧಿಕಾರಿಗಳೊಂದಿಗೆ ಫೋಟೋ ತೆಗೆಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ತಾನೊಬ್ಬ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಈ ಐನಾತಿ ಮಹಿಳೆ ಈಗ ಬಂಧನಕ್ಕೊಳಗಾಗಿದ್ದಾಳೆ.
ಮೋನಾ ಯಾರು?
ರಾಜಸ್ಥಾನದ ನಾಗೌರ್ ಜಿಲ್ಲೆಯ ನಿಂಬಾಕೆಬಾಸ್ ಗ್ರಾಮದ ಮೋನಾ ಬುಗಾಲಿಯಾ ತಂದೆ ಟ್ರಕ್ ಚಾಲಕರಾಗಿದ್ದಾರೆ. 2021ರಲ್ಲಿ ಪಿಎಸ್‌ಐ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಆಕೆ, ‘ಮೂಲಿ ದೇವಿ’ ಎಂಬ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ, ತಾನು ಕ್ರೀಡಾ ಕೋಟಾದಲ್ಲಿ ಆಯ್ಕೆಯಾಗಿದ್ದೇನೆ ಎಂದು ರಾಜಸ್ಥಾನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿಗೆ ಸೇರಿಕೊಂಡಿದ್ದಳು. ಎರಡು ವರ್ಷಗಳ ಕಾಲ ಸಮವಸ್ತ್ರ ಧರಿಸಿ ಪೆರೇಡ್ ಮೈದಾನದಲ್ಲಿ ಕಾಣಿಸಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ಪೊಲೀಸ್ ಅಧಿಕಾರಿಯಾಗಿ ಪ್ರಚಾರ ಮಾಡಿಕೊಂಡಿದ್ದಳು.
ಸಿಕ್ಕಿಬಿದ್ದಿದ್ದು ಹೇಗೆ?
ಮೋನಾ, ಸಬ್-ಇನ್ಸ್‌ಪೆಕ್ಟರ್ ನೇಮಕಾತಿಗಾಗಿ ರಚಿಸಲಾದ ವಾಟ್ಸಾಪ್ ಗುಂಪಿನಲ್ಲಿ ಸಕ್ರಿಯವಾಗಿದ್ದಳು. ಸ್ಫೂರ್ತಿದಾಯಕ ಭಾಷಣಗಳನ್ನು ನೀಡುತ್ತಾ, ಹಿರಿಯ ಅಧಿಕಾರಿಗಳೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಳು. ಆದರೆ, ಕೆಲ ತರಬೇತಿಯಲ್ಲಿದ್ದ ಪಿಎಸ್‌ಐ ಅಭ್ಯರ್ಥಿಗಳು ಆಕೆಯ ಗುರುತಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದಾಗ, ಆಂತರಿಕ ತನಿಖೆ ಆರಂಭವಾಯಿತು. ಪರಾರಿಯಾಗಿದ್ದ ಮೋನಾ, ಕೊನೆಗೂ ಸಿಕಾರ್ ಜಿಲ್ಲೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.
ಪೊಲೀಸ್ ಶೋಧದ ವೇಳೆ ಆಕೆಯ ಬಾಡಿಗೆ ಮನೆಯಿಂದ 7 ಲಕ್ಷ ರೂ. ನಗದು, ಮೂರು ಪೊಲೀಸ್ ಸಮವಸ್ತ್ರಗಳು, ಹಲವು ಪ್ರಶ್ನೆಪತ್ರಿಕೆಗಳು, ಮತ್ತು ನಕಲಿ ದಾಖಲೆಗಳು ವಶಕ್ಕೆ ಬಂದಿವೆ. ವಿಚಾರಣೆಯಲ್ಲಿ ಆಕೆ, ತನ್ನ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಪೊಲೀಸ್ ಅಧಿಕಾರದ ದುರ್ಬಳಕೆಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಗಿ ಒಪ್ಪಿಕೊಂಡಿದ್ದಾಳೆ. ಪೊಲೀಸರು ಈ ಕುರಿತು ತನಿಖೆ ಮುಂದುವರೆಸಿದ್ದಾರೆ.