ಮೊಟ್ಟೆಯಲ್ಲಿ ಕ್ಯಾನ್ಸರ್‌‌​ಕಾರಕ ಅಂಶವಿಲ್ಲ, ಆತಂಕ ಪಡುವ ಅಗತ್ಯ ಇಲ್ಲ: FSSAI ಸ್ಪಷ್ಟನೆ

Untitled design 2025 12 21T080309.103

ನವದೆಹಲಿ, ಡಿಸೆಂಬರ್ 21, 2025: ಇತ್ತೀಚಿನ ದಿನಗಳಲ್ಲಿ ಭಾರತದಾದ್ಯಂತ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ರಾಸಾಯನಿಕಗಳು ಇವೆ ಎಂಬ ಆತಂಕಕಾರಿ ಸುದ್ದಿ ಹರಿದಾಡಿತ್ತು. ಯೂಟ್ಯೂಬ್ ಚಾನಲ್ ಟ್ರಸ್ಟಿಫೈಡ್‌ನಲ್ಲಿ ಪ್ರಸಾರವಾದ ವರದಿಯಿಂದ ಜನರು ಆತಂಕಗೊಂಡಿದ್ದರು. ಆದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಇದಕ್ಕೆ ಸ್ಪಷ್ಟ ಉತ್ತರ ನೀಡಿದ್ದು, ಮೊಟ್ಟೆ ಸೇವನೆಯಿಂದ ಕ್ಯಾನ್ಸರ್ ಅಪಾಯವಿಲ್ಲ, ಆತಂಕದ ಅಗತ್ಯವೇ ಇಲ್ಲ ಎಂದು ತಿಳಿಸಿದೆ.

ವಿವಾದದ ಮೂಲ

ಟ್ರಸ್ಟಿಫೈಡ್ ಚಾನಲ್‌ನಲ್ಲಿ ಎಗ್ಗೋಸ್ ಬ್ರ್ಯಾಂಡ್‌ನ ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್‌ನ ಮೆಟಬಾಲೈಟ್ AOZ ಪತ್ತೆಯಾಗಿದೆ ಎಂದು ಹೇಳಲಾಗಿತ್ತು. ಇದು ಕ್ಯಾನ್ಸರ್ ಕಾರಕ ಎಂದು ಆರೋಪಿಸಲಾಗಿತ್ತು. ಈ ವರದಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆದು, ಮೊಟ್ಟೆ ತಿನ್ನುವುದನ್ನೇ ನಿಲ್ಲಿಸುವಂತಹ ಸಲಹೆಗಳು ಬಂದಿದ್ದವು. ಆದರೆ FSSAIಯ ಪರೀಕ್ಷೆಗಳು ಮತ್ತು ವೈಜ್ಞಾನಿಕ ವಿಶ್ಲೇಷಣೆಯಿಂದ ಈ ಆರೋಪಗಳು ತಪ್ಪು ಎಂದು ಸಾಬೀತಾಗಿದೆ.

FSSAI ಸ್ಪಷ್ಟನೆ

ಈ ಘಟನೆಗೆ ಸಂಬಂಧಿಸಿದಂತೆ FSSAI ಅಧಿಕೃತ ಹೇಳಿಕೆ ನೀಡಿದ್ದು, ಭಾರತದಲ್ಲಿ ಮೊಟ್ಟೆ ಉತ್ಪಾದನೆಯ ಎಲ್ಲಾ ಹಂತಗಳಲ್ಲಿಯೂ ನೈಟ್ರೋಫ್ಯೂರಾನ್‌ನ ಬಳಕೆಯನ್ನು 2011ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳ ಅಡಿಯಲ್ಲಿ ಸಂಪೂರ್ಣ ನಿಷೇಧಿಸಲಾಗಿದೆ. ಇದು ಜನರ ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಗುರುತಿಸಿ ನಿಷೇಧಿಸಲಾಗಿದೆ. ಪ್ರಾಧಿಕಾರವು ದೇಶಾದ್ಯಂತದ ಮೊಟ್ಟೆಗಳನ್ನು ಪರೀಕ್ಷಿಸಿ, ಯಾವುದೇ ಅಪಾಯಕಾರಿ ಅಂಶಗಳು ಪತ್ತೆಯಾಗಿಲ್ಲ ಎಂದು ದೃಢಪಡಿಸಿದೆ.

FSSAIಯ ಪ್ರಕಾರ, ನೈಟ್ರೋಫ್ಯೂರಾನ್‌ನ ಮೆಟಬಾಲೈಟ್‌ಗಳಿಗೆ 1.0 ಮೈಕ್ರೋಗ್ರಾಂ/ಕೆ.ಜಿ.ಗೆ ಎಕ್ಸ್‌ಟ್ರಾನಿಯಸ್ ಮ್ಯಾಕ್ಸಿಮಮ್ ರೆಸಿಡ್ಯೂ ಲಿಮಿಟ್ (EMRL) ನಿಗದಿಪಡಿಸಲಾಗಿದೆ. ಇದು ಕೇವಲ ನಿಯಂತ್ರಣಕ್ಕಾಗಿ ಮಾತ್ರವೇ. ಈ ಮಿತಿಗಿಂತ ಕಡಿಮೆ ಅಂಶ ಪತ್ತೆಯಾದರೆ ಅದು ಯಾವುದೇ ಆರೋಗ್ಯ ಅಪಾಯವನ್ನು ಸೂಚಿಸುವುದಿಲ್ಲ ಎಂದು ತಿಳಿಸಿದೆ.

 ವಿವಾದದ ಹಿನ್ನೆಲೆ

ನೈಟ್ರೋಫ್ಯೂರಾನ್ ಅನ್ನು ಹಿಂದೆ ಕೋಳಿಗಳಲ್ಲಿ ಬ್ಯಾಕ್ಟೀರಿಯಾ ಸೋಂಕು ತಡೆಗಟ್ಟಲು ಬಳಸಲಾಗುತ್ತಿತ್ತು. ಆದರೆ ಇದರ ಮೆಟಬಾಲೈಟ್‌ಗಳು ಪ್ರಾಣಿಗಳಲ್ಲಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುವುದು ಖಚಿತವಾದ ನಂತರ, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ನಿಷೇಧಿಸಲಾಗಿದೆ. ಟ್ರಸ್ಟಿಫೈಡ್‌ನ ವರದಿಯಲ್ಲಿ ಪತ್ತೆಯಾದ ಅಂಶವು ಈ ಮಿತಿಗಿಂತ ಕಡಿಮೆಯಾಗಿದ್ದರೂ, ಅದನ್ನು ದುರುಪಯೋಗಿಸಿ ಆತಂಕ ಸೃಷ್ಟಿಸಲಾಗಿತ್ತು ಎಂದು FSSAI ಹೇಳಿದೆ.

Exit mobile version