ರಾಜಕೀಯ ಪಕ್ಷಗಳಿಗೆ ₹3,811 ಕೋಟಿ ಫಂಡ್: ಶೇ.82% ಹಣ ಬಿಜೆಪಿಗೆ!

Untitled design (67)

ನವದೆಹಲಿ: ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿದ ನಂತರದ ಮೊದಲ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳಿಗೆ ಹರಿದುಬಂದಿರುವ ದೇಣಿಗೆಯ ಮೊತ್ತ ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. 2024-25ರ ಹಣಕಾಸು ವರ್ಷದಲ್ಲಿ ಒಂಬತ್ತು ಪ್ರಮುಖ ಚುನಾವಣಾ ಟ್ರಸ್ಟ್‌ಗಳು ಒಟ್ಟು 3,811 ಕೋಟಿ ರೂಪಾಯಿ ದೇಣಿಗೆಯನ್ನು ಘೋಷಿಸಿವೆ. ಇದು ಹಿಂದಿನ ವರ್ಷಕ್ಕೆ (₹1,218 ಕೋಟಿ) ಹೋಲಿಸಿದರೆ ಬರೊಬ್ಬರಿ 200% ಕ್ಕಿಂತ ಹೆಚ್ಚಿನ ಏರಿಕೆಯಾಗಿದೆ.

ಬಿಜೆಪಿಯ ಪಾಲೇ ಸಿಂಹಪಾಲು

ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ವರದಿಗಳ ಪ್ರಕಾರ, ಒಟ್ಟು ದೇಣಿಗೆಯಲ್ಲಿ ನಾಲ್ಕನೇ ಐದನೇ ಭಾಗದಷ್ಟು, ಅಂದರೆ ಸುಮಾರು ಶೇ. 82 ರಷ್ಟು (₹3,112 ಕೋಟಿ) ಹಣ ನೇರವಾಗಿ ಭಾರತೀಯ ಜನತಾ ಪಕ್ಷದ (BJP) ಖಜಾನೆಗೆ ಸೇರಿದೆ. ಇದಕ್ಕೆ ವ್ಯತಿರಿಕ್ತವಾಗಿ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ಗೆ ಕೇವಲ ಶೇ. 8 ರಷ್ಟು ಅಂದರೆ ₹299 ಕೋಟಿ ದೇಣಿಗೆ ಮಾತ್ರ ಲಭಿಸಿದೆ. ಉಳಿದ ಶೇ. 10 ರಷ್ಟು ಅಂದರೆ ₹400 ಕೋಟಿ ಹಣವು ಪ್ರಾದೇಶಿಕ ಮತ್ತು ಇತರ ಪಕ್ಷಗಳ ನಡುವೆ ಹಂಚಿಹೋಗಿದೆ.

ಬಿಜೆಪಿಯ ಅತಿ ದೊಡ್ಡ ದಾನಿಯಾಗಿ ಪ್ರುಡೆಂಟ್ ಎಲೆಕ್ಟೋರಲ್ ಟ್ರಸ್ಟ್ ಹೊರಹೊಮ್ಮಿದೆ. ಈ ಟ್ರಸ್ಟ್ ಒಟ್ಟು ₹2,668 ಕೋಟಿ ಸಂಗ್ರಹಿಸಿದ್ದು, ಅದರಲ್ಲಿ ₹2,180 ಕೋಟಿಯನ್ನು ಬಿಜೆಪಿಗೆ ನೀಡಿದೆ. ಈ ಟ್ರಸ್ಟ್‌ಗೆ ಭಾರತಿ ಏರ್‌ಟೆಲ್, ಮೇಘಾ ಎಂಜಿನಿಯರಿಂಗ್, ಜಿಂದಾಲ್ ಸ್ಟೀಲ್ ಮತ್ತು ಅರಬಿಂದೋ ಫಾರ್ಮಾದಂತಹ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಹಣ ನೀಡಿವೆ. ವಿಶೇಷವೆಂದರೆ, ಈ ಟ್ರಸ್ಟ್ ಕಾಂಗ್ರೆಸ್, ಟಿಎಂಸಿ ಮತ್ತು ಎಎಪಿ ಪಕ್ಷಗಳಿಗೂ ಸಣ್ಣ ಪ್ರಮಾಣದ ದೇಣಿಗೆ ನೀಡಿದೆ.

ಟಾಟಾ ಗ್ರೂಪ್ ಮತ್ತು ಇತರ ಟ್ರಸ್ಟ್‌ಗಳ ಪಾಲು

ಪ್ರೋಗ್ರೆಸ್ಸಿವ್ ಎಲೆಕ್ಟೋರಲ್ ಟ್ರಸ್ಟ್ ಒಟ್ಟು ₹914.97 ಕೋಟಿ ದೇಣಿಗೆ ನೀಡಿದ್ದು, ಅದರಲ್ಲಿ ಶೇ. 80 ರಷ್ಟನ್ನು ಬಿಜೆಪಿಗೆ ನೀಡಿದೆ. ಈ ಟ್ರಸ್ಟ್‌ಗೆ ಟಾಟಾ ಸನ್ಸ್, ಟಿಸಿಎಸ್ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಟಾಟಾ ಗ್ರೂಪ್‌ನ ಕಂಪನಿಗಳು ಪ್ರಮುಖ ಕೊಡುಗೆ ನೀಡಿವೆ.

2023-24ರಲ್ಲಿ ಬಿಜೆಪಿಗೆ ಬಂದಿದ್ದ ಒಟ್ಟು ದೇಣಿಗೆಯಲ್ಲಿ ಶೇ. 43 ರಷ್ಟು ಚುನಾವಣಾ ಬಾಂಡ್‌ಗಳಿಂದ ಬಂದಿತ್ತು. ಆದರೆ ಸುಪ್ರೀಂ ಕೋರ್ಟ್ ಅನಾಮಧೇಯ ನಿಧಿ ಯೋಜನೆಯನ್ನು ರದ್ದುಗೊಳಿಸಿದ ನಂತರ, ಈಗ ಕಾರ್ಪೊರೇಟ್‌ಗಳು ಚೆಕ್, ಡಿಡಿ ಅಥವಾ ಯುಪಿಐ ಮೂಲಕ ಮಾತ್ರ ದೇಣಿಗೆ ನೀಡಬಹುದಾಗಿದೆ. ಇದು ದೇಣಿಗೆ ನೀಡುವವರ ವಿವರಗಳನ್ನು ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಘೋಷಿಸಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿದೆ.

Exit mobile version