ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಗಗನಕ್ಕೇರುತ್ತಿರುವ ಇಂಧನ ಬೆಲೆಗಳಿಂದ ತತ್ತರಿಸುತ್ತಿರುವ ಜಾಗತಿಕ ಮಾರುಕಟ್ಟೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಿಗ್ ರಿಲೀಫ್ ನೀಡಿದ್ದಾರೆ. ತೈಲ ಬೆಲೆಯನ್ನು ಹತೋಟಿಗೆ ತರುವ ನಿಟ್ಟಿನಲ್ಲಿ, ಕೆಲವು ದೇಶಗಳ ಮೇಲೆ ವಿಧಿಸಲಾಗಿದ್ದ ಕಠಿಣ ತೈಲ ರಫ್ತು ನಿರ್ಬಂಧಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
ಬೆಲೆ ಏರಿಕೆಗೆ ಕಡಿವಾಣ ಹಾಕುವ ತಂತ್ರ
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಪರ್ಷಿಯನ್ ಗಲ್ಫ್‌ನ ಪ್ರಮುಖ ಹಡಗು ಮಾರ್ಗಗಳಲ್ಲಿ ತೈಲ ಪೂರೈಕೆಗೆ ಅಡ್ಡಿಯಾಗಿದೆ. ಇದರ ನೇರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದು ಅಮೆರಿಕ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕತೆಯ ಮೇಲೆ ಒತ್ತಡ ಹೇರುತ್ತಿದೆ. ಈ ಪರಿಸ್ಥಿತಿಯನ್ನು ತಿಳಿಗೊಳಿಸಲು ಅಮೆರಿಕ ಆಡಳಿತವು ನಿರ್ಬಂಧಗಳ ತೆರವು ಮಾಡುವ (Sanction Waivers) ನಿರ್ಧಾರಕ್ಕೆ ಬಂದಿದೆ.
ಯಾವಾಗಲಿದ್ದಾವೆ ಈ ಬದಲಾವಣೆಗಳು?
ಜಾಗತಿಕ ತೈಲ ಬಿಕ್ಕಟ್ಟು ಸ್ಥಿರವಾಗುವವರೆಗೆ ಇದೊಂದು ಅಲ್ಪಾವಧಿಯ ಕ್ರಮವಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಬಿಕ್ಕಟ್ಟು ಸರಿಯಾಗುವವರೆಗೂ ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು, ಇದರಿಂದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ತೈಲ ಹರಿಯಲಿದ್ದು, ಸಹಜವಾಗಿಯೇ ಬೆಲೆಗಳು ಇಳಿಕೆಯಾಗಲಿವೆ.
ಕೇವಲ ನಿರ್ಬಂಧ ತೆರವು ಮಾತ್ರವಲ್ಲದೆ, ಸಮುದ್ರ ಮಾರ್ಗದಲ್ಲಿ ತೈಲ ಸಾಗಿಸುವ ಪಾಲುದಾರ ರಾಷ್ಟ್ರಗಳ ಸರಕು ಹಡಗುಗಳಿಗೆ ಅಮೆರಿಕವು ವಿಶೇಷ ಭದ್ರತೆ (Escort) ನೀಡಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಯುದ್ಧ ಪೀಡಿತ ಪ್ರದೇಶದ ಮಾರ್ಗವಾಗಿ ಚಲಿಸುವ ಹಡಗುಗಳ ಮೇಲೆ ದಾಳಿಯಾಗುವ ಆತಂಕವಿರುವುದರಿಂದ, ಅಮೆರಿಕದ ನೌಕಾಪಡೆಯು ಈ ಹಡಗುಗಳಿಗೆ ರಕ್ಷಣೆ ನೀಡುವ ಸಾಧ್ಯತೆಯಿದೆ.
ಟ್ರಂಪ್ ಹೇಳಿದ್ದೇನು?
ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದ ಟ್ರಂಪ್, ನಾವು ಕೆಲವು ದೇಶಗಳ ಮೇಲೆ ತೈಲ ಸಂಬಂಧಿತ ನಿರ್ಬಂಧಗಳನ್ನು ಹೊಂದಿದ್ದೇವೆ. ಆದರೆ ಈಗ ಬೆಲೆಗಳನ್ನು ಕಡಿಮೆ ಮಾಡುವುದು ಮತ್ತು ಜನಸಾಮಾನ್ಯರಿಗೆ ಹೊರೆಯಾಗದಂತೆ ನೋಡುವುದು ನಮಗೆ ಮುಖ್ಯವಾಗಿದೆ. ಹಾಗಾಗಿ, ಈ ಬಿಕ್ಕಟ್ಟು ಸರಿಯಾಗುವವರೆಗೆ ನಾವು ಆ ನಿರ್ಬಂಧಗಳನ್ನು ಮನ್ನಾ ಮಾಡುತ್ತಿದ್ದೇವೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ.
ಈ ನಿರ್ಧಾರವು ಭಾರತದಂತಹ ತೈಲ ಆಮದು ಮಾಡಿಕೊಳ್ಳುವ ದೇಶಗಳಿಗೆ ದೊಡ್ಡ ವರದಾನವಾಗಲಿದೆ. ಪೂರೈಕೆ ಹೆಚ್ಚಾದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಆದರೆ, ಈ ನಿರ್ಬಂಧ ತೆರವು ಯಾವೆಲ್ಲಾ ದೇಶಗಳಿಗೆ ಅನ್ವಯಿಸುತ್ತದೆ ಎಂಬುದನ್ನು ಅಮೆರಿಕ ಸರ್ಕಾರ ಶೀಘ್ರದಲ್ಲೇ ಸ್ಪಷ್ಟಪಡಿಸಲಿದೆ.
