ಡಿಂಪಲ್ ಯಾದವ್ ಸೀರೆ ಬಗ್ಗೆ ಮೌಲ್ವಿ ಆಕ್ಷೇಪ: ಸಂಸತ್‌ನಲ್ಲಿ ಬಿಜೆಪಿ ಪ್ರತಿಭಟನೆ!

ಮೌಲಾನಾ ಸಾಜಿದ್ ರಶೀದಿ ಟೀಕೆಗೆ ಎನ್‌ಡಿಎ ಆಕ್ರೋಶ!

Untitled design (45)

ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಅವರು ದಿಲ್ಲಿಯ ಸಂಸತ್ ಮಾರ್ಗದಲ್ಲಿರುವ ಮಸೀದಿಗೆ ಭೇಟಿ ನೀಡಿದ್ದ ವೇಳೆ ಧರಿಸಿದ್ದ ಸೀರೆಯ ಬಗ್ಗೆ ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್‌ನ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಬಿಜೆಪಿ ಮತ್ತು ಎನ್‌ಡಿಎ ಸಂಸದರು ರಶೀದಿಯ ಹೇಳಿಕೆಯ ವಿರುದ್ಧ ಸಂಸತ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಈ ಘಟನೆಯಲ್ಲಿ, ಡಿಂಪಲ್ ಯಾದವ್ ಅವರು ತಮ್ಮ ಪತಿ ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಇತರೆ ಸಂಸದರಾದ ಧರ್ಮೇಂದ್ರ ಯಾದವ್, ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ರಾಂಪುರ ಸಂಸದ ಹಾಗೂ ಮಸೀದಿಯ ಇಮಾಮ್ ಮೌಲಾನಾ ಮೊಹಿಬುಲ್ಲಾ ನದ್ವಿ ಅವರೊಂದಿಗೆ ಮಸೀದಿಯಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಡಿಂಪಲ್ ಯಾದವ್ ಸೀರೆಯಲ್ಲಿ ತಲೆಯನ್ನು ಮುಚ್ಚಿಕೊಳ್ಳದೆ ಇದ್ದುದಕ್ಕೆ ಮೌಲಾನಾ ಸಾಜಿದ್ ರಶೀದಿ ಟಿವಿ ಚರ್ಚೆಯೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಡಿಂಪಲ್ ಯಾದವ್ ಅವರ ಬೆನ್ನು ಬೆತ್ತಲೆಯಾಗಿತ್ತು, ತಲೆಯನ್ನು ಮುಚ್ಚಿಕೊಂಡಿರಲಿಲ್ಲ. ಇದೇ ರೀತಿಯ ವಸ್ತ್ರವನ್ನು ಧರಿಸಿ ದೇವಸ್ಥಾನಕ್ಕೆ ಹೋಗುತ್ತಾರೆಯೇ?” ಎಂದು ರಶೀದಿ ಪ್ರಶ್ನಿಸಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿದ್ದ ಇಕ್ರಾ ಹಾಸನ್ ಸೇರಿದಂತೆ ಇತರ ಮಹಿಳೆಯರು ಸೂಕ್ತವಾಗಿ ತಲೆಯನ್ನು ಮುಚ್ಚಿಕೊಂಡಿದ್ದರು ಎಂದು ಮೌಲಾನಾ ಸಾಜಿದ್ ರಶೀದಿ ದೂರಿದ್ದಾನೆ.

ರಶೀದಿಯ ಈ ಹೇಳಿಕೆ ಟಿವಿ ಚರ್ಚೆಯಲ್ಲಿ ವೈರಲ್ ಆಗಿದ್ದು, ಲಕ್ನೋದಲ್ಲಿ ಸಮಾಜವಾದಿ ಪಕ್ಷದ ನಾಯಕ ಪ್ರವೇಶ್ ಯಾದವ್ ರಶೀದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಈ ಟೀಕೆಯನ್ನು ಮಹಿಳಾ ವಿರೋಧಿ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತದ್ದು ಎಂದು ಆರೋಪಿಸಲಾಗಿದೆ. ಆದರೆ, ರಶೀದಿ ತಾನು ಯಾವುದೇ ಆಕ್ಷೇಪಾರ್ಹ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. “ಡಿಂಪಲ್ ಯಾದವ್ ದೇವಸ್ಥಾನಕ್ಕೂ ಇದೇ ರೀತಿಯ ವಸ್ತ್ರ ಧರಿಸುತ್ತಾರೆ ಎಂದು ಒಪ್ಪಿಕೊಂಡರೆ ಕ್ಷಮೆಯಾಚಿಸುತ್ತೇನೆ,” ಎಂದು ಮೌಲಾನಾ ಸಾಜಿದ್ ರಶೀದಿ ಹೇಳಿದ್ದಾನೆ.

ಡಿಂಪಲ್ ಯಾದವ್ ಮತ್ತು ಅಖಿಲೇಶ್ ಯಾದವ್ ಈ ವಿವಾದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ಇದು ರಾಜಕೀಯ ಸಭೆಯಾಗಿರಲಿಲ್ಲ. ನಮ್ಮ ಸಂಸದ ಇಮಾಮ್ ನದ್ವಿ ಆಹ್ವಾನದ ಮೇರೆಗೆ ಭೇಟಿಯಾಗಿದ್ದೆವು. ಬಿಜೆಪಿ ಜನರ ಗಮನವನ್ನು ದೇಶದ ಪ್ರಮುಖ ವಿಷಯಗಳಿಂದ ಬೇರೆಡೆಗೆ ಸೆಳೆಯಲು ಈ ರೀತಿಯ ಆರೋಪಗಳನ್ನು ಮಾಡುತ್ತಿದೆ,” ಎಂದು ಡಿಂಪಲ್ ಯಾದವ್ ಹೇಳಿದ್ದಾರೆ. ಅಖಿಲೇಶ್ ಯಾದವ್ ಕೂಡ, “ನಂಬಿಕೆ ಜನರನ್ನು ಒಗ್ಗೂಡಿಸುತ್ತದೆ, ಆದರೆ ಬಿಜೆಪಿ ಧರ್ಮವನ್ನು ವಿಭಜನೆಯ ಸಾಧನವಾಗಿ ಬಳಸುತ್ತಿದೆ,” ಎಂದು ಟೀಕಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಸೇರಿದಂತೆ ಎನ್‌ಡಿಎ ಸಂಸದರು ಇಂದು (ಜುಲೈ 28) ಸಂಸತ್‌ನ ಹೊರಗೆ ಪ್ರತಿಭಟನೆ ನಡೆಸಿ, ರಶೀದಿಯ ಹೇಳಿಕೆಯನ್ನು “ಮಹಿಳಾ ವಿರೋಧಿ” ಎಂದು ಖಂಡಿಸಿದ್ದಾರೆ. “ಅಖಿಲೇಶ್ ಯಾದವ್ ಮತ್ತು ಸಮಾಜವಾದಿ ಪಕ್ಷವು ಓಟ್‌ಬ್ಯಾಂಕ್ ರಾಜಕೀಯಕ್ಕಾಗಿ ಮೌನವಾಗಿದೆ,” ಎಂದು ಭಂಡಾರಿ ಆರೋಪಿಸಿದ್ದಾರೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಕೂಡ ಈ ಟೀಕೆಯನ್ನು “ನಾಚಿಕೆಗೇಡು” ಎಂದು ಕರೆದಿದ್ದಾರೆ.

ಈ ವಿವಾದವು ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಾಗ್ವಾದಕ್ಕೆ ದಾರಿಯಾಗಿದೆ. ಲಕ್ನೋ ಪೊಲೀಸರು ರಶೀದಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿದಿದೆ.

Exit mobile version