ಪಶ್ಚಿಮ ಬಂಗಾಳದಲ್ಲಿ ‘ಇವಿಎಂ’ ಬಟನ್‌ಗೆ ಟೇಪ್ ಹಚ್ಚಿ ಮತದಾನಕ್ಕೆ ಅಡ್ಡಿ: ವಿಡಿಯೋ ವೈರಲ್‌

Untitled design 2026 04 29T134827.287

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಗಂಭೀರ ಅಕ್ರಮ ಆರೋಪಗಳು ಕೇಳಿಬಂದಿದೆ. ಡೈಮಂಡ್ ಹಾರ್ಬರ್ ಕ್ಷೇತ್ರದ ಫಾಲ್ಟಾ ಪ್ರದೇಶದಲ್ಲಿ ಚುನಾವಣಾ ಅಕ್ರಮ ವರದಿಯಾಗಿದೆ. ಹಲವಾರು ಮತಗಟ್ಟೆಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರವಾಗಿ ಜಹಾಂಗೀರ್ ಖಾನ್ ಸ್ಪರ್ಧಿಸುತ್ತಿರುವ ಈ ಕ್ಷೇತ್ರದಲ್ಲಿ, ಎಲೆಕ್ಟ್ರಾನಿಕ್ ಮತಯಂತ್ರದ (ಇವಿಎಂ) ಬಟನ್‌ಗಳನ್ನು ಸೆಲ್ಲೋ ಟೇಪ್ ನಿಂದ ಮುಚ್ಚಲಾಗಿದೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತೀವ್ರ ಆರೋಪ ಮಾಡಿದೆ.

ಏನಿದು ಆರೋಪ?

ಬಿಜೆಪಿ ಪಕ್ಷದ ಆರೋಪ ಪ್ರಕಾರ, ಕೆಲವು ಮತಗಟ್ಟೆಗಳಲ್ಲಿ ಇವಿಎಂ (EVM) ಯಂತ್ರದ ಮೇಲೆ ಇರುವ ಕಮಲ ಚಿಹ್ನೆಯ ಮುಂದೆ ಇರುವ ಬಟನ್‌ಗೆ ಸೆಲ್ಲೋ ಟೇಪ್ ಅಂಟಿಸಿ, ಮತದಾರರು ಆ ಪಕ್ಷಕ್ಕೆ ಮತ ಹಾಕದಂತೆ ತಡೆಯಲಾಗಿದೆ ಎಂದು ಹೇಳಲಾಗಿದೆ. ಇದರ ಪರಿಣಾಮವಾಗಿ ಮತದಾರರು ಕಮಲದ ಗುರುತಿಗೆ ಮತ ಹಾಕಲು ಸಾಧ್ಯವಾಗದೇ ದಿಕ್ಕು ತಪ್ಪಿದರು. ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಈ ಘಟನೆಗೆ ತೀವ್ರ ಕಿಡಿಕಾರಿದ್ದು, ಇದನ್ನು ‘ಡೈಮಂಡ್ ಹಾರ್ಬರ್ ಮಾಡೆಲ್’ ಎಂದು ಕರೆದಿದ್ದಾರೆ.

ಬಿಜೆಪಿ ಏನು ಹೇಳುತ್ತಿದೆ?

“ಪಶ್ಚಿಮ ಬಂಗಾಳದ ಫಾಲ್ಟಾ ಪ್ರದೇಶದ ಮತಗಟ್ಟೆಗಳಲ್ಲಿ EVM ಗಳ ಬಟನ್‌ಗಳನ್ನು ಟೇಪ್ ಹಾಕಿ ಮುಚ್ಚಲಾಗಿದೆ. ಇದೊಂದು ಗಂಭೀರ ಅಕ್ರಮ. ಮತದಾರರು ಎಲ್ಲಿ ಟೇಪ್ ಇದೆಯೋ ಅಲ್ಲಿ ಒತ್ತಲು ಹಿಂಜರಿಯುತ್ತಾರೆ. ಕಮಲದ ಬಟನ್ ಮೇಲೆ ಇರುವ ಟೇಪ್, ಆ ಚಿಹ್ನೆಗೆ ಮತ ಹಾಕದಂತೆ ಜನರಿಗೆ ತಡೆಯೊಡ್ಡಿದೆ. ಇದು ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಗೇ ಧಕ್ಕೆ ತರುವ ಕೃತ್ಯ” ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.

ಇದೇ ವೇಳೆ, ತೃಣಮೂಲ ಕಾಂಗ್ರೆಸ್ ಪರವಾಗಿ ಸ್ಪರ್ಧಿಸುತ್ತಿರುವ ಜಹಾಂಗೀರ್ ಖಾನ್ ಅವರ ಬೆಂಬಲಿಗರೇ ಈ ಅಕ್ರಮಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ.

ಡೈಮಂಡ್ ಹಾರ್ಬರ್ ಮಾಡೆಲ್ ಎಂದರೇನು?

ಡೈಮಂಡ್ ಹಾರ್ಬರ್ ಪ್ರದೇಶದಲ್ಲಿ ಹಿಂದೆಯೂ ಅಕ್ರಮ ಚುನಾವಣಾ ತಂತ್ರಗಳು ವರದಿಯಾಗಿವೆ. ಆದರೆ ಈ ಬಾರಿ ಇವಿಎಂ ಬಟನ್‌ಗೇ ಟೇಪ್ ಹಚ್ಚಿ ಮತದಾನವನ್ನೇ ನಿರ್ಬಂಧಿಸಿರುವುದು ಹೊಸ ರೀತಿಯ ಅಕ್ರಮವಾಗಿದೆ. ‘ಇದು ಪ್ರಜಾಪ್ರಭುತ್ವದ ಕೊಲೆ’ ಎಂದು ಬಿಜೆಪಿ ದೂರಿದೆ.

ಮರುಮತದಾನದ ಆಗ್ರಹ

ಈ ಘಟನೆ ಬೆನ್ನಲ್ಲೇ ಬಿಜೆಪಿ ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಸಿಡಿದೆದ್ದಿದೆ. ಅಕ್ರಮ ನಡೆದಿರುವ ಎಲ್ಲಾ ಮತಗಟ್ಟೆಗಳಲ್ಲಿ ತಕ್ಷಣವೇ ಮರುಮತದಾನ ನಡೆಸಬೇಕೆಂದು ಬಿಜೆಪಿ ಚುನಾವಣಾ ಆಯೋಗಕ್ಕೆ ಒತ್ತಾಯಿಸಿದೆ. ಅಲ್ಲದೇ, ಘಟನೆ ಸಂಬಂಧ ಸ್ವತಂತ್ರ ತನಿಖೆಗೂ ಆಗ್ರಹಿಸಲಾಗಿದೆ. ಚುನಾವಣಾ ಆಯೋಗ ಈ ವಿಚಾರದಲ್ಲಿ ತೀವ್ರ ಕ್ರಮ ಕೈಗೊಳ್ಳಬೇಕು ಎಂದು ಪಕ್ಷದ ರಾಷ್ಟ್ರೀಯ ನಾಯಕರು ಸೂಚಿಸಿದ್ದಾರೆ.

Exit mobile version