ಆಗಸ್ಟ್ 2025 ರಲ್ಲಿ ಭಾರತದಿಂದ ಗಡಿಪಾರು ಮಾಡಲಾದ 38 ವರ್ಷದ ಬಾಂಗ್ಲಾದೇಶ ಮಹಿಳೆಯೊಬ್ಬರು ಯಾವುದೇ ದಾಖಲೆಗಳಿಲ್ಲದೇ ಭಾರತ ಪ್ರವೇಶಿಸಿ ಮುಂಬೈನಲ್ಲಿ ಓಡಾಡುತ್ತಿರುವುದು ಕಂಡು ಬಂದಿದೆ.
ಮುಂಬೈಯ ಪ್ರಸಿದ್ಧ ಪ್ರವಾಸಿ ತಾಣವಾದ ಗೇಟ್ ವೇ ಆಫ್ ಇಂಡಿಯಾ ಬಳಿ ಬಾಂಗ್ಲಾದೇಶ ಮಹಿಳೆ ಝುಲೈಕಾ ಜಮಾಲ್ ಶೇಖ್ ಪತ್ತೆಯಾಗಿದ್ದಾಳೆ. ಝುಲೈಕಾ ಜಮಾಲ್ ಶೇಖ್ ಬಾಂಗ್ಲಾದೇಶದ ಜಶೋರ್ ಜಿಲ್ಲೆಯ ನಿವಾಸಿಯಾಗಿದ್ದು, ಯಾವುದೇ ಪಾಸ್‌ಪೋರ್ಟ್ ಅಥವಾ ವೀಸಾ ಇಲ್ಲದೇ ಭಾರತದ ಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ ಎಂಬ ಆರೋಪದ ಮೇಲೆ ಕಳೆದ ವರ್ಷ (ಆಗಸ್ಟ್ 2025) ಗಡಿಪಾರು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಆಕೆ ಮುಂಬೈನ ಫುಟ್‌ಪಾತ್‌ನಲ್ಲಿ ವಾಸಿಸುತ್ತಿದ್ದಳು. ಅಗತ್ಯ ದಾಖಲೆಗಳಿಲ್ಲದೆ ಭಾರತದಲ್ಲಿ ವಾಸವಾಗಿದ್ದ ಕಾರಣ ವಿದೇಶಿಗರ ಕಾಯ್ದೆಯಡಿ ಆಕೆಯನ್ನು ಬಂಧಿಸಿ, ನಂತರ ಬಾಂಗ್ಲಾದೇಶದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.
ಆದರೆ ಇದೀಗ ಮತ್ತೆ ಮುಂಬೈನ ಪ್ರಸಿದ್ಧ ಗೇಟ್‌ವೇ ಆಫ್ ಇಂಡಿಯಾ ಪ್ರದೇಶದ ಬಳಿ ಝುಲೈಕಾ ಕಾಣಿಸಿಕೊಂಡಿದ್ದಾಳೆ..ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಮತ್ತು ಗುಪ್ತಚರ ದಳ, ಝುಲೈಕಾ ಭಾರತಕ್ಕೆ ಮರು ಪ್ರವೇಶ ಪಡೆದ ಮಾರ್ಗದ ಕುರಿತು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಜನರನ್ನು ಕರೆತರುವ ಸಂಘಟಿತ ದಂಧೆ ಸಕ್ರಿಯವಾಗಿದ್ದು, ಇದರಲ್ಲಿ ಮಧ್ಯವರ್ತಿಗಳು ದೊಡ್ಡ ಮೊತ್ತದ ಹಣ ಪಡೆದು ಗಡಿ ದಾಟಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಉತ್ತರ ಪೂರ್ವ ಭಾರತದ ಕೆಲವು ಗಡಿ ಪ್ರದೇಶಗಳು ಈ ರೀತಿಯ ಅಕ್ರಮ ನುಸುಳಿಕೆಗೆ ಹೆಚ್ಚು ಬಳಕೆಯಾಗುತ್ತಿವೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಝುಲೈಕಾ ಪ್ರಕರಣ ದೊಡ್ಡ ಜಾಲದ ಒಂದು ಕೊಂಡಿಯಾಗಿರಬಹುದು ಎಂಬ ಅನುಮಾನದಿಂದ, ಪೊಲೀಸರು ದಂಧೆಯ ಬುಡಕ್ಕೇ ಬೆಂಕಿ ಇಡುವ ಉದ್ದೇಶದಿಂದ ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮಾನವ ಕಳ್ಳಸಾಗಣೆ, ನಕಲಿ ದಾಖಲೆ ತಯಾರಿಕೆ, ಗಡಿ ದಾಟಿಸುವ ಏಜೆಂಟುಗಳು ಹಾಗೂ ಅವರಿಗೆ ಬೆಂಬಲ ನೀಡುವ ಸ್ಥಳೀಯ ಸಂಪರ್ಕಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
