ಅಣ್ಣ ಫೋನ್ ಕಾಲ್‌ನಲ್ಲಿರುವಾಗಲೇ ತಂಗಿಯ ಹತ್ಯೆ..!: ಖಾಕಿ ಬಲೆಗೆ ಬಿದ್ದ ಕೊಲೆಗಾರ ಪತಿ

Untitled design 2026 01 30T125723.653

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾನವೀಯತೆಯನ್ನು ನಡುಗಿಸುವಂತಹ ಭೀಕರ ಹತ್ಯೆಯೊಂದು ನಡೆದಿದೆ. ಸ್ವಾಟ್ (SWAT) ಮಹಿಳಾ ಕಮಾಂಡೋ ಆಗಿದ್ದ ಯುವ ಪೊಲೀಸ್ ಅಧಿಕಾರಿಯನ್ನು ಅವರ ಪತಿ ಲೋಹದ ಜಿಮ್ ಡಂಬಲ್‌ನಿಂದ ತಲೆ ಜಜ್ಜಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತಪಟ್ಟ ಮಹಿಳೆಯನ್ನು ಕಾಜಲ್ ಚೌಧರಿ ಎಂದು ಗುರುತಿಸಲಾಗಿದ್ದು, ಆರೋಪಿ ಅಂಕುರ್ ಚೌಧರಿ ರಕ್ಷಣಾ ಇಲಾಖೆಯಲ್ಲಿ ನೌಕರನಾಗಿದ್ದ. 2023ರ ನವೆಂಬರ್‌ನಲ್ಲಿ ಕಾಜಲ್ ಅವರನ್ನು ಅಂಕುರ್‌ನೊಂದಿಗೆ ವಿವಾಹ ನಡೆದಿತ್ತು. ಆದರೆ ಮದುವೆಯ ಕೆಲವೇ ದಿನಗಳಲ್ಲಿ ವರದಕ್ಷಿಣೆ ವಿಚಾರವಾಗಿ ಕಾಜಲ್‌ ಮೇಲೆ ಕಿರುಕುಳ ಆರಂಭವಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸ್ ಮಾಹಿತಿಯ ಪ್ರಕಾರ, ದೆಹಲಿಯ ದ್ವಾರಕಾ ಮೋರ್ ಪ್ರದೇಶದಲ್ಲಿರುವ ದಂಪತಿಯ ನಿವಾಸದಲ್ಲಿ ಜನವರಿ 22ರ ರಾತ್ರಿ ಈ ಭೀಕರ ಘಟನೆ ನಡೆದಿದೆ.  ಅಂಕುರ್ ಚೌಧರಿ, ತನ್ನ ಪತ್ನಿ ಕಾಜಲ್ ಮೇಲೆ ಜಿಮ್‌ನಲ್ಲಿ ಬಳಸುವ ಲೋಹದ ಡಂಬಲ್‌ನಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯ ತಲೆಯನ್ನು ಬಾಗಿಲಿನ ಚೌಕಟ್ಟಿಗೆ ಬಲವಾಗಿ ಹೊಡೆದ ಪರಿಣಾಮ ಆಕೆಗೆ ತೀವ್ರ ಮೆದುಳು ಗಾಯವಾಗಿತ್ತು.

ಅಣ್ಣನ ಫೋನ್ ಕಾಲ್ ನಡುವೆಯೇ ನಡೆದ ಹತ್ಯೆ

ಕಾಜಲ್ ಅವರ ಅಣ್ಣ ನಿಖಿಲ್ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿರುವಾಗಲೇ ಅಂಕುರ್ ಹಲ್ಲೆ ನಡೆಸಿದ್ದಾನೆ. ನಿಖಿಲ್ ದೆಹಲಿಯ ಪಾರ್ಲಿಮೆಂಟ್ ರಸ್ತೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಆ ದಿನ ರಾತ್ರಿ ಸುಮಾರು 10 ಗಂಟೆಗೆ ಅಂಕುರ್ ನಿಖಿಲ್‌ಗೆ ಕರೆ ಮಾಡಿ, “ನಿನ್ನ ತಂಗಿ ನನ್ನೊಂದಿಗೆ ಜಗಳವಾಡುತ್ತಿದ್ದಾಳೆ” ಎಂದು ಹೇಳಿದ್ದ. ಬಳಿಕ ಕಾಜಲ್ ಫೋನ್ ಪಡೆದು ಅಣ್ಣನೊಂದಿಗೆ ಮಾತನಾಡಲು ಮುಂದಾಗುತ್ತಿದ್ದಂತೆಯೇ, ಅಂಕುರ್ ಆಕೆಯಿಂದ ಫೋನ್ ಕಸಿದುಕೊಂಡು ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಫೋನ್‌ನಲ್ಲಿದ್ದ ನಿಖಿಲ್‌ಗೆ ಕಾಜಲ್ ಅವರ ಕಿರುಚಾಟ ಮಾತ್ರ ಕೇಳಿಸಿಕೊಂಡಿದ್ದ. ಕೆಲವೇ ಕ್ಷಣಗಳಲ್ಲಿ ಕರೆ ಕಡಿತಗೊಂಡಿತ್ತು.

ಸುಮಾರು ಐದು ನಿಮಿಷಗಳ ಬಳಿಕ ಮತ್ತೆ ಕರೆ ಮಾಡಿದ ಅಂಕುರ್, “ನಿನ್ನ ತಂಗಿಯನ್ನು ಕೊಂದುಬಿಟ್ಟಿದ್ದೀನಿ, ಬಂದು ಶವ ತೆಗೆದುಕೊಂಡು ಹೋಗು” ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸುದ್ದಿ ಕೇಳಿ ಬೆಚ್ಚಿಬಿದ್ದ ನಿಖಿಲ್ ತಕ್ಷಣ ಕುಟುಂಬಸ್ಥರೊಂದಿಗೆ ದೆಹಲಿಗೆ ದೌಡಾಯಿಸಿದರು.

ಘಟನೆಯ ನಂತರ ಗಂಭೀರವಾಗಿ ಗಾಯಗೊಂಡಿದ್ದ ಕಾಜಲ್ ಅವರನ್ನು ಮೊದಲು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಆಕೆಯ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿದೆ ಎಂದು ತಿಳಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಗಾಜಿಯಾಬಾದ್‌ನ ನೆಹರು ನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಜನವರಿ 25ರಂದು ಚಿಕಿತ್ಸೆ ಫಲಕಾರಿಯಾಗದೇ ಕಾಜಲ್ ಅವರು ಕೊನೆಯುಸಿರೆಳೆದರು.

ವರದಕ್ಷಿಣೆ ದೌರ್ಜನ್ಯವೇ ಮೂಲ ಕಾರಣ?

ಪೊಲೀಸ್ ತನಿಖೆಯಲ್ಲಿ, ಕಾಜಲ್ ಮತ್ತು ಅಂಕುರ್ ನಡುವೆ ವರದಕ್ಷಿಣೆ ವಿಚಾರವಾಗಿ ನಿರಂತರ ಜಗಳ ನಡೆಯುತ್ತಿದ್ದುದಾಗಿ ತಿಳಿದುಬಂದಿದೆ. ವಿವಾಹದ ಬಳಿಕವೂ ಅಂಕುರ್ ಹಾಗೂ ಅವನ ಕುಟುಂಬಸ್ಥರು ಹೆಚ್ಚಿನ ವರದಕ್ಷಿಣೆಗೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ದಂಪತಿ ನಡುವೆ ಪದೇಪದೇ ಕಲಹ ಉಂಟಾಗುತ್ತಿತ್ತು ಎಂದು ಕಾಜಲ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಆರೋಪಿ ಬಂಧನ

ಘಟನೆಯ ಬಳಿಕ ಪರಾರಿಯಾಗಲು ಯತ್ನಿಸಿದ್ದ ಅಂಕುರ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆ ವೇಳೆ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Exit mobile version