ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣ: ಕಾರು ಮಾಲೀಕ ತಾರೀಕ್‌ ಅರೆಸ್ಟ್‌‌

Untitled design 2025 11 11T074301.811

ನವದೆಹಲಿ: ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟವು ದೇಶವನ್ನೇ ನಡುಗಿಸಿದೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸ್ಫೋಟದಲ್ಲಿ ಬಳಸಲಾದ ಕಾರಿನ ಮಾಲೀಕನನ್ನು ಪತ್ತೆ ಹಚ್ಚಿದ ತನಿಖಾ ಅಧಿಕಾರಿಗಳು ಇದೀಗ ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ಸ್ಫೋಟದ ತೀವ್ರತೆಯಿಂದ ಸುತ್ತಮುತ್ತಲಿನ ಹಲವು ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಈ ಘಟನೆಯನ್ನು ಶಂಕಿತ ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿ, ದೆಹಲಿ ಪೊಲೀಸ್ ವಿಶೇಷ ಘಟಕ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳದಲ್ಲಿ ತೀವ್ರ ತನಿಖೆ ನಡೆಸುತ್ತಿವೆ.

ಕಾರು ಯಾರದ್ದು? ಹೇಗೆ ಸ್ಫೋಟವಾಯ್ತು?

ಸ್ಫೋಟಕ್ಕೆ ಬಳಸಲಾದ ಕಾರು ಹುಂಡೈ i20 (HR26CE7674) ಆಗಿದ್ದು, ಇದು ಹರಿಯಾಣ ನೋಂದಣಿಯ ವಾಹನ. ಮೊದಲಿಗೆ ಕಾರು ದೆಹಲಿಯ ಮೊಹಮ್ಮದ್ ಸಲ್ಮಾನ್ ಅವರ ಹೆಸರಿನಲ್ಲಿ ದಾಖಲಾಗಿದ್ದು, ನಂತರ ಅವರು, ಕಾರನ್ನು ಜಮ್ಮು-ಕಾಶ್ಮೀರದ ಪುಲ್ವಾಮಾದ ತಾರೀಕ್ ಎಂಬಾತನಿಗೆ ಮಾರಾಟ ಮಾಡಿದ್ದರು. ಇಬ್ಬರನ್ನೂ ಈಗ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ದೆಹಲಿ ಪೊಲೀಸರು, ಎನ್‌ಐಎ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹ ಕೈಗೊಂಡಿವೆ. ವಿಧಿವಿಜ್ಞಾನ ತಜ್ಞರು ಕಾರಿನ ಅವಶೇಷಗಳು ಮತ್ತು ಸುತ್ತಮುತ್ತಲಿನ ಪ್ರದೇಶದಿಂದ ಸ್ಫೋಟಕದ ಗುರುತುಗಳನ್ನು ಸಂಗ್ರಹಿಸಿದ್ದಾರೆ.

ದೆಹಲಿ ಪೊಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪ್ರಕರಣ ದಾಖಲಿಸಿದ್ದಾರೆ. ಇವು ಭಯೋತ್ಪಾದಕ ಕೃತ್ಯಗಳು ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವ ಚಟುವಟಿಕೆಗಳಿಗೆ ಸಂಬಂಧಿಸಿವೆ. ಜೊತೆಗೆ, ಸ್ಫೋಟಕ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಸಹ ಕೇಸ್ ದಾಖಲಾಗಿದೆ.

ಸ್ಫೋಟಕ್ಕೂ ಮೊದಲು i20 ಕಾರು ದೆಹಲಿಯ ವಿವಿಧ ಭಾಗಗಳಲ್ಲಿ ಸಂಚರಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಕಾರು ಮಧ್ಯಾಹ್ನ 3:19ಕ್ಕೆ ಕೆಂಪುಕೋಟೆ ಪಾರ್ಕಿಂಗ್ ಬಳಿ ಪ್ರವೇಶಿಸಿದ್ದು, ಸುಮಾರು ಮೂರು ಗಂಟೆಗಳ ಕಾಲ ಅಲ್ಲಿ ನಿಂತಿತ್ತು. ಸಂಜೆ 6:48ಕ್ಕೆ ಕಾರು ಹೊರಟು ಕೆಂಪುಕೋಟೆ ಮೆಟ್ರೋ ನಿಲ್ದಾಣದ ಗೇಟ್ ನಂ. 1 ತಲುಪಿದೆ. ಕೆಲವೇ ಕ್ಷಣಗಳಲ್ಲಿ ಭೀಕರ ಸ್ಫೋಟ ಸಂಭವಿಸಿದೆ.

ಆತ್ಮಹತ್ಯಾ ಬಾಂಬರ್ ದಾಳಿ ಶಂಕೆ

ಸ್ಫೋಟದ ತೀವ್ರತೆ ಮತ್ತು ಕಾರಿನ ಒಳಗಿದ್ದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇದು ಆತ್ಮಹತ್ಯಾ ಬಾಂಬರ್ ದಾಳಿಯಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ  ಸುತ್ತಮುತ್ತಲಿನ ನಾಲ್ಕು ವಾಹನಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಎನ್‌ಐಎ, ದೆಹಲಿ ಪೊಲೀಸ್ ವಿಶೇಷ ಘಟಕ ಹಾಗೂ ಗುಪ್ತಚರ ಸಂಸ್ಥೆಗಳು ಈ ಪ್ರಕರಣವನ್ನು ತನಿಖೆ ಮಾಡುತ್ತಿವೆ. ಕಾರಿನ ಮೂಲ, ಬಳಸಲಾದ ಸ್ಫೋಟಕಗಳ ಬಗ್ಗೆ ಪತ್ತೆಹಚ್ಚಲು ಪ್ರಯತ್ನ ಆರಂಭಗೊಂಡಿವೆ. “ಘಟನೆಯು ಸಂಘಟಿತ ಭಯೋತ್ಪಾದಕ ಜಾಲದ ಭಾಗವಾಗಿರಬಹುದೆಂದು ಸಾಧ್ಯತೆ ಇದೆ. ತಾರೀಕ್ ಹಾಗೂ ಸಲ್ಮಾನ್ ಅವರ ಸಂಪರ್ಕ ವಲಯಗಳನ್ನು ವಿಶ್ಲೇಷಿಸಲಾಗುತ್ತಿದೆ,” ಎಂದು ಪೊಲೀಸ್ ಮೂಲಗಳು ತಿಳಿಸಲಾಗಿದೆ.

ಸ್ಫೋಟದ ನಂತರ ದೆಹಲಿಯ ಪ್ರಮುಖ ಸ್ಮಾರಕಗಳು, ಸರ್ಕಾರಿ ಕಚೇರಿಗಳು ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.  ಸ್ಫೋಟದ ನಂತರ ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಕೇಂದ್ರ ಸರ್ಕಾರ ತಕ್ಷಣದ ಕ್ರಮ ಕೈಗೊಂಡಿದೆ. ಗೃಹ ಸಚಿವ ಅಮಿತ್ ಶಾ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ವರದಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ತಿಳಿಸಿದ್ದಾರೆ.

Exit mobile version