ನವದೆಹಲಿಯ ವಾಯುವ್ಯ ಭಾಗದ ಲಕ್ಷ್ಮಿಬಾಯಿ ಕಾಲೇಜಿನ ಸಮೀಪ ದೆಹಲಿ ವಿಶ್ವವಿದ್ಯಾಲಯದ ಎರಡನೇ ವರ್ಷದ ವಿದ್ಯಾರ್ಥಿನಿ ಮೇಲೆ ಆಸಿಡ್ ದಾಳಿ ನಡೆದ ಘಟನೆ ಆತಂಕಕಾರಿಯಾಗಿದೆ. ಈ ದಾಳಿಯು ಕಾಲೇಜಿನಿಂದ ಸ್ವಲ್ಪ ದೂರದಲ್ಲಿ ಸಂಭವಿಸಿದ್ದು, ಸಂತ್ರಸ್ತೆ ಹೆಚ್ಚುವರಿ ತರಗತಿಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದೆಹಲಿ ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದು, ಆರೋಪಿಗಳನ್ನ ಬಂಧಿಸಲು ಕಾರ್ಯಾಚರಣೆ ಶುರು ಮಾಡಿದ್ದಾರೆ.
20 ವರ್ಷದ ಈ ವಿದ್ಯಾರ್ಥಿನಿ, ಅಶೋಕ್ ವಿಹಾರ್‌ನ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಓದುತ್ತಿದ್ದು, ಘಟನೆಯ ಸಮಯದಲ್ಲಿ ತನ್ನ ಮುಖವನ್ನು ರಕ್ಷಿಸಿಕೊಳ್ಳಲು ಯಶಸ್ವಿಯಾಗಿದ್ದಾಳೆ. ಆದರೆ, ಆಕೆಯ ಎರಡೂ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಆಕೆಯನ್ನು ತಕ್ಷಣ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಗಳು ಚಿಕ್ಕದಾಗಿರುವ ಕಾರಣ ಶೀಘ್ರದಲ್ಲೇ ಆಕೆಯನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ದಾಳಿಯ ಸಂದರ್ಭದಲ್ಲಿ ಆಕೆಯ ಮೇಲೆ ಸುಡುವ ರಾಸಾಯನಿಕ ವಸ್ತುವನ್ನು ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಆರೋಪಿ ಜಿತೇಂದ್ರ ಎಂಬಾತ ಸಂತ್ರಸ್ತೆಗೆ ಪರಿಚಿತನಾಗಿದ್ದಾನೆ. ಇವನು ಸಮೀಪದ ಮುಕುಂದ್‌ಪುರದ ನಿವಾಸಿಯಾಗಿದ್ದು, ಇಬ್ಬರು ಸಹಚರರಾದ ಇಶಾನ್ ಮತ್ತು ಅರ್ಮಾನ್ ಜೊತೆಗೆ ಮೋಟಾರ್‌ಸೈಕಲ್‌ನಲ್ಲಿ ಆಗಮಿಸಿದ್ದ ಎಂದು ತಿಳಿದುಬಂದಿದೆ. ದಾಳಿಯ ವೇಳೆ ಇಶಾನ್ ಆಸಿಡ್ ಎಸೆದಿದ್ದು, ಅರ್ಮಾನ್ ಬಾಟಲಿಯನ್ನು ನೀಡಿದ್ದಾನೆ ಎಂದು ಶಂಕಿಸಲಾಗಿದೆ. ಘಟನೆಯ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.
ತನಿಖೆಯಿಂದ ಜಿತೇಂದ್ರ ಸಂತ್ರಸ್ತೆಯನ್ನು ಹಿಂಬಾಲಿಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಸುಮಾರು ಒಂದು ತಿಂಗಳ ಹಿಂದೆ ಇವರಿಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎಂದು ಪೊಲೀಸರು ದೃಢಪಡಿಸಿದ್ದಾರೆ. ಈ ವಾಗ್ವಾದವೇ ದಾಳಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸಂತ್ರಸ್ತೆ ತನ್ನ ರಕ್ಷಣೆಗಾಗಿ ತಕ್ಷಣ ಕೈಗಳಿಂದ ಮುಖವನ್ನು ಮುಚ್ಚಿಕೊಂಡಿದ್ದರಿಂದ ಗಂಭೀರ ಗಾಯಗಳಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ, ಕೈಗಳಿಗೆ ಉಂಟಾದ ಸುಟ್ಟ ಗಾಯಳಾಗಿವೆ.
ದೆಹಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪರಾಧ ತನಿಖಾ ಘಟಕ ಮತ್ತು ಎಫ್‌ಎಸ್‌ಎಲ್ (ಫಾರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ) ತಂಡಗಳನ್ನು ನಿಯೋಜಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿಕೋರರಾದ ಜಿತೇಂದ್ರ, ಇಶಾನ್ ಮತ್ತು ಅರ್ಮಾನ್‌ರನ್ನು ಬಂಧಿಸಲು ತೀವ್ರ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
