ದೆಹಲಿಯಲ್ಲಿ ದಟ್ಟ ಮಂಜು: 100ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದು

Untitled design 2025 12 30T203603.315

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಳಿ ಹಾಗೂ ದಟ್ಟ ಮಂಜು (Dense Fog) ಆವರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ವಿಮಾನಯಾನಗಲ ಮೇಲೆ ಹವಾಮಾನ ವೈಪರೀತ್ಯವು ಭಾರೀ ಹೊಡೆತ ನೀಡಿದ್ದು, ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (IGI Airport) ವಿಮಾನಗಳ ಕಾರ್ಯಾಚರಣೆ ಸಂಪೂರ್ಣ ಹದಗೆಟ್ಟಿದೆ.

ಗೋಚರತೆ ಕುಸಿತ: 118 ವಿಮಾನಗಳು ರದ್ದು

ದೆಹಲಿಯಲ್ಲಿ ಮಂಗಳವಾರ ಮುಂಜಾನೆಯಿಂದಲೇ ದಟ್ಟವಾದ ಮಂಜು ಕವಿದಿದ್ದರಿಂದ ರನ್‌ವೇನಲ್ಲಿ ಗೋಚರತೆ (Visibility) ಶೂನ್ಯಕ್ಕೆ ತಲುಪಿತ್ತು. ಇದರಿಂದಾಗಿ ಸುರಕ್ಷತೆಯ ದೃಷ್ಟಿಯಿಂದ 118 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ. ಅಷ್ಟೇ ಅಲ್ಲದೆ, ಇಳಿಯಲು ಸಾಧ್ಯವಾಗದ 16 ವಿಮಾನಗಳನ್ನು ಜೈಪುರ, ಲಕ್ನೋ ಮತ್ತು ಅಹಮದಾಬಾದ್‌ನಂತಹ ಹತ್ತಿರದ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಾವಣೆ (Divert) ಮಾಡಲಾಗಿದೆ.

ಸಾಮಾನ್ಯವಾಗಿ ದೆಹಲಿ ವಿಮಾನ ನಿಲ್ದಾಣವು ದಿನವೊಂದಕ್ಕೆ ಸುಮಾರು 1,300 ವಿಮಾನಗಳ ಸಂಚಾರವನ್ನು ನಿರ್ವಹಿಸುತ್ತದೆ. ಆದರೆ, ಪ್ರಕೃತಿಯ ವಿಕೋಪದಿಂದಾಗಿ ಸಾವಿರಾರು ಪ್ರಯಾಣಿಕರು ನಿಲ್ದಾಣದಲ್ಲಿಯೇ ಗಂಟೆಗಟ್ಟಲೆ ಕಾಯುವಂತಾಗಿದೆ. ಅನೇಕ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳು ವಿಳಂಬವಾಗಿ ಸಂಚರಿಸುತ್ತಿವೆ.

ವಿಮಾನಯಾನದಲ್ಲಿ ಉಂಟಾಗಿರುವ ಈ ಭಾರಿ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಸಚಿವಾಲಯ, ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ (Airlines) ತುರ್ತು ಸೂಚನೆ ನೀಡಿದೆ. ಪ್ರಯಾಣಿಕರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ನಿಗದಿತ ಸೌಲಭ್ಯ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ವಿಮಾನ ರದ್ದತಿ ಅಥವಾ ವಿಳಂಬದ ಬಗ್ಗೆ ಪ್ರಯಾಣಿಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಹಾಗೂ ನಿಲ್ದಾಣದಲ್ಲಿ ಕಾಯುತ್ತಿರುವವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸಚಿವಾಲಯ ಆದೇಶಿಸಿದೆ.

ಕೇವಲ ವಿಮಾನಯಾನ ಮಾತ್ರವಲ್ಲದೆ, ದೆಹಲಿಗೆ ಬರುವ ಮತ್ತು ಇಲ್ಲಿಂದ ಹೊರಡುವ ಸುಮಾರು 25ಕ್ಕೂ ಹೆಚ್ಚು ರೈಲುಗಳು ಮಂಜಿನ ಕಾರಣದಿಂದಾಗಿ 3 ರಿಂದ 6 ಗಂಟೆಗಳ ಕಾಲ ವಿಳಂಬವಾಗಿ ಸಂಚರಿಸುತ್ತಿವೆ. ರಸ್ತೆ ಸಾರಿಗೆಯಲ್ಲೂ ವಾಹನ ಸವಾರರು ದೀಪಗಳನ್ನು ಬೆಳಗಿಸಿಕೊಂಡು (ಹೆಡ್‌ಲೈಟ್‌) ಬಳಸಿ ರಸ್ತೆಯಲ್ಲಿ ಓಡಾಡುವ  ಪರಿಸ್ಥಿತಿ ನಿರ್ಮಾಣವಾಗಿದೆ.

ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಎರಡು-ಮೂರು ದಿನಗಳ ಕಾಲ ಇದೇ ರೀತಿಯ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ. ಹೀಗಾಗಿ ಪ್ರಯಾಣಿಕರು ಮನೆಯಿಂದ ಹೊರಡುವ ಮೊದಲು ತಮ್ಮ ವಿಮಾನ ಅಥವಾ ರೈಲಿನ ಸ್ಥಿತಿಯನ್ನು (Status) ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Exit mobile version