ನವದೆಹಲಿ: ನಾವು ಬಳಸುವ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸೌಲಭ್ಯಗಳು ಎಷ್ಟು ಸುಲಭವಾಗಿದೆಯೋ, ಅಷ್ಟೇ ಅಪಾಯಕಾರಿ ಎಂಬುದಕ್ಕೆ ಈ ಹೊಸ ಡೇಟಾ ಸೋರಿಕೆ (Data Breach) ಪ್ರಕರಣ ಸಾಕ್ಷಿಯಾಗಿದೆ. ಜಗತ್ತಿನಾದ್ಯಂತ ಬರೋಬ್ಬರಿ 14.9 ಕೋಟಿ ಬಳಕೆದಾರರ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ಗಳು ಹ್ಯಾಕರ್‌ಗಳ ಪಾಲಾಗಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ.
ಯಾವೆಲ್ಲಾ ಖಾತೆಗಳು ಸೋರಿಕೆಯಾಗಿವೆ ?
ಪ್ರಸಿದ್ಧ ಸೈಬರ್ ಸೆಕ್ಯುರಿಟಿ ಸಂಶೋಧಕ ಜೆರೆಮಿಯಾ ಫೌಲರ್ ಅವರು ಈ ಬೃಹತ್ ಡೇಟಾ ಸೋರಿಕೆಯನ್ನು ಪತ್ತೆಹಚ್ಚಿದ್ದಾರೆ. ಈ ಲೀಕ್ ಆಗಿರುವ 14.9 ಕೋಟಿ ಖಾತೆಗಳ ಪೈಕಿ ನಮ್ಮ ದೈನಂದಿನ ಬಳಕೆಯ ಅಪ್ಲಿಕೇಶನ್‌ಗಳೇ ಹೆಚ್ಚಿವೆ ಅವುಗಳೆಂದರೆ, 4.8 ಕೋಟಿ ಜಿಮೇಲ್ (Gmail) ಖಾತೆಗಳು, 1.7 ಕೋಟಿ ಫೇಸ್‌ಬುಕ್ (Facebook) ಖಾತೆಗಳು, 65 ಲಕ್ಷ ಇನ್‌ಸ್ಟಾಗ್ರಾಮ್ (Instagram) ಖಾತೆಗಳು, 34 ಲಕ್ಷ ನೆಟ್‌ಫ್ಲಿಕ್ಸ್ (Netflix) ಖಾತೆಗಳ, ಜೊತೆಗೆ ಔಟ್‌ಲುಕ್ (Outlook) 15 ಲಕ್ಷ ಖಾತೆಗಳ ಡೇಟಾ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.
ಇದಲ್ಲದೆ ಆಪಲ್ ಐಕ್ಲೌಡ್ (iCloud), ಯಾಹೂ (Yahoo), ಹಾಗೂ ಮೈಕ್ರೋಸಾಫ್ಟ್ ಖಾತೆಗಳು ಮಾತ್ರವಲ್ಲದೆ ಅನೇಕ ಶೈಕ್ಷಣಿಕ ಮತ್ತು ಸಾಂಸ್ಥಿಕ ಇಮೇಲ್ ಐಡಿಗಳು ಕೂಡ ಲೀಕ್ ಆಗಿವೆ. ಅಂದರೆ, ನೀವು ಕೇವಲ ಮನರಂಜನೆಗೆ ಮಾತ್ರವಲ್ಲದೆ ಕೆಲಸದ ಉದ್ದೇಶಕ್ಕೆ ಬಳಸುವ ಖಾತೆಗ ಡೇಟಾಗಳೂ ಸೋರಿಕೆಯಾಗಿವೆ.
ಇದರಿಂದಾಗುವ ಅಪಾಯಗಳೇನು ?
ಬಳಕೆದಾರರ ಪಾಸ್‌ವರ್ಡ್‌ಗಳು ಸೋರಿಕೆಯಾದಾಗ ಹ್ಯಾಕರ್‌ಗಳು ನಿಮ್ಮ ವೈಯಕ್ತಿಕ ಫೋಟೋಗಳು, ಸಂದೇಶಗಳು ಹಾಗೂ ಬ್ಯಾಂಕಿಂಗ್ ವಿವರಗಳನ್ನು ಸುಲಭವಾಗಿ ಪ್ರವೇಶಿಸಬಹುದು. ನಿಮ್ಮ ಹೆಸರಿನಲ್ಲಿ ಹಣದ ವಂಚನೆ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಸಾಧ್ಯತೆಗಳಿರುತ್ತವೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡೇಟಾ ಲೀಕ್ ಆಗಿರುವುದು ಜಾಗತಿಕ ಡಿಜಿಟಲ್ ಲೋಕವನ್ನೇ ಅಲುಗಾಡಿಸಿದೆ.
ನೀವು ಏನು ಮಾಡಬೇಕು ?
ಈ ಅಪಾಯದಿಂದ ಪಾರಾಗಲು ತಜ್ಞರು ಕೆಲವು ತುರ್ತು ಸಲಹೆಗಳನ್ನು ನೀಡಿದ್ದಾರೆ. ಅವುಗಳೆಂದರೆ,
-
ಪಾಸ್‌ವರ್ಡ್ ಬದಲಿಸಿ: ನಿಮ್ಮ ಸಾಮಾಜಿಕ ಜಾಲತಾಣ ಮತ್ತು ಇಮೇಲ್ ಖಾತೆಗಳ ಪಾಸ್‌ವರ್ಡ್ ಅನ್ನು ಕೂಡಲೇ ಬದಲಾಯಿಸಿ.
-
2FA ಸಕ್ರಿಯಗೊಳಿಸಿ: ನಿಮ್ಮ ಖಾತೆಗಳಿಗೆ ‘ಟೂ-ಫ್ಯಾಕ್ಟರ್ ಅಥೆಂಟಿಕೇಶನ್’ (Two-Factor Authentication) ಕಡ್ಡಾಯವಾಗಿ ಅಳವಡಿಸಿ.
-
ಒಂದೇ ಪಾಸ್‌ವರ್ಡ್ ಬೇಡ: ಎಲ್ಲಾ ಅಪ್ಲಿಕೇಶನ್‌ಗಳಿಗೂ ಒಂದೇ ಪಾಸ್‌ವರ್ಡ್ ಬಳಸುವ ಅಭ್ಯಾಸ ಬಿಡಿ.
ಈ ಬೃಹತ್ ಡೇಟಾ ಹಗರಣವು ಡಿಜಿಟಲ್ ಯುಗದಲ್ಲಿ ಬಳಕೆದಾರರ ಜಾಗರೂಕತೆ ಎಷ್ಟು ಮುಖ್ಯ ಎಂಬುದನ್ನು ನೆನಪಿಸಿದೆ.
