110 ಕೆಜಿ ಗಾಂಜಾ ಸಾಗಿಸುತ್ತಿದ್ದ 22 ‘ಬುದ್ಧ ಸನ್ಯಾಸಿಗಳು’ ವಿಮಾನ ನಿಲ್ದಾಣದಲ್ಲಿ ಅರೆಸ್ಟ್!

BeFunky collage (7)

ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯ ವೇಳೆ ಡ್ರಗ್ಸ್ ಪತ್ತೆಯಾಗುವುದು ಹೊಸತಲ್ಲ. ಆದರೆ, ಯಾರೂ ಊಹಿಸದ ರೀತಿಯಲ್ಲಿ ಸನ್ಯಾಸಿಗಳ ವೇಷ ಧರಿಸಿ ಭಾರಿ ಪ್ರಮಾಣದ ಗಾಂಜಾ ಕಳ್ಳಸಾಗಾಣಿಕೆ ಮಾಡುತ್ತಿದ್ದ ಜಾಲವೊಂದನ್ನು ಶ್ರೀಲಂಕಾ ಪೊಲೀಸರು ಬೇಧಿಸಿದ್ದಾರೆ. ಥಾಯ್‌ಲೆಂಡ್‌ನಿಂದ ಮರಳಿದ 22 ಬೌದ್ಧ ಸನ್ಯಾಸಿಗಳನ್ನು ಬಂಧಿಸಲಾಗಿದ್ದು, ಅವರಿಂದ ಬರೋಬ್ಬರಿ 110 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ತಪಾಸಣೆ ವೇಳೆ ಬಯಲಾದ ಮಹಾ ಮೋಸ

ಶ್ರೀಲಂಕಾದ ಕೊಲೊಂಬೊ ವಿಮಾನ ನಿಲ್ದಾಣದಲ್ಲಿ ನಡೆದ ಈ ಕಾರ್ಯಾಚರಣೆ ಇತ್ತೀಚಿನ ವರ್ಷಗಳಲ್ಲೇ ನಡೆದ ಅತೀ ದೊಡ್ಡ ಮಾದಕ ದ್ರವ್ಯ ಬೇಟೆ ಎಂದು ಹೇಳಲಾಗುತ್ತಿದೆ. ಬಂಧಿತ ಪ್ರತಿಯೊಬ್ಬ ಸನ್ಯಾಸಿಯ ಬಳಿ ತಲಾ 5 ಕೆಜಿಯಷ್ಟು ಗಾಂಜಾ ಇತ್ತು. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಮೌಲ್ಯ ಸುಮಾರು 3.45 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 28 ಕೋಟಿ ರೂ.ಗೂ ಹೆಚ್ಚು) ಎಂದು ಅಂದಾಜಿಸಲಾಗಿದೆ.

ಸನ್ಯಾಸಿಗಳ ವೇಷವೇ ರಕ್ಷಾಕವಚ?

ಸನ್ಯಾಸಿಗಳನ್ನು ಸಾಮಾನ್ಯವಾಗಿ ಗೌರವದಿಂದ ಕಾಣಲಾಗುತ್ತದೆ ಮತ್ತು ಹೆಚ್ಚಿನ ಕಡೆಗಳಲ್ಲಿ ಅವರ ಮೇಲೆ ಅನುಮಾನ ಬರುವುದಿಲ್ಲ ಎಂಬ ಕಾರಣಕ್ಕೆ ಈ ಮಾರ್ಗವನ್ನು ಆರಿಸಿಕೊಳ್ಳಲಾಗಿತ್ತು. ತಮ್ಮ ಲಗೇಜ್ ಬ್ಯಾಗ್‌ಗಳಲ್ಲಿ ಅತ್ಯಂತ ಜಾಣ್ಮೆಯಿಂದ ಗಾಂಜಾವನ್ನು ಇಟ್ಟುಕೊಂಡು ಸಾಗಾಟ ಮಾಡಲಾಗುತ್ತಿತ್ತು. ಆದರೆ, ಅಧಿಕಾರಿಗಳ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಈ ‘ಪ್ಲಾನ್’ ಫಲಿಸಲಿಲ್ಲ.

ಬೃಹತ್ ಜಾಲದ ಶಂಕೆ :

ಏಪ್ರಿಲ್ 22 ರಂದು ಈ ಸನ್ಯಾಸಿಗಳು ಶ್ರೀಲಂಕಾದಿಂದ ಥಾಯ್‌ಲೆಂಡ್‌ಗೆ ತೆರಳಿದ್ದರು. ಅವರಿಗೆ ಉಚಿತ ವಿಮಾನ ಟಿಕೆಟ್ ನೀಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಇದರ ಹಿಂದೆ ದೊಡ್ಡ ಮಾಫಿಯಾ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸನ್ಯಾಸಿಗಳನ್ನು ದಾಳವಾಗಿ ಬಳಸಿಕೊಂಡಿರುವ ಸಾಧ್ಯತೆಗಳಿದ್ದು, ತನಿಖಾ ಸಂಸ್ಥೆಗಳು ಈ ಜಾಲದ ಮೂಲವನ್ನು ಹುಡುಕುತ್ತಿವೆ.

Exit mobile version